ಕಾಂಗ್ರೆಸ್, ಜೆಡಿಎಸ್ ಎರಡು ಒಂದೇ: ಈ ಕುಟುಂಬವಾದಿ ಪಕ್ಷಗಳಿಂದ ಅಭಿವೃದ್ದಿಯಾಗಲ್ಲ- ಪ್ರಧಾನಿ ಮೋದಿ ವಾಗ್ದಾಳಿ.
ಚಿತ್ರದುರ್ಗ : ಕಾಂಗ್ರೆಸ್, ಜೆಡಿಎಸ್ ನೋಡಲು ಬೇರೆ ಅಷ್ಟೆ. ಎರಡೂ ಪಕ್ಷಗಳು ಒಂದೇ. ಕಾಂಗ್ರೆಸ್ ಹಾಗೂ ಜೆಡಿಎಸ್ ಕುಟುಂಬವಾದಿ ಪಕ್ಷಗಳು. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಭ್ರಷ್ಟಾಚಾರಕ್ಕೆ ಒತ್ತು ನೀಡುತ್ತವೆ . ಅವುಗಳಿಂದ ಅಭಿವೃದ್ದಿಯಾಗಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಚಿತ್ರದುರ್ಗದ ಜಯದೇವ ಮುರುಘ ರಾಜೇಂದ್ರ ಮೈದಾನದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕ ಬಿಜೆಪಿ ಘಟಕಕ್ಕೆ ನಾನು ಅಭಿನಂದನೆ ತಿಳಿಸುತ್ತೇನೆ. ನಿನ್ನೆ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಇದು ಮಾದರಿಯಾದಂತಹ ಪ್ರಣಾಳಿಕೆಯಾಗಿದೆ. ಪ್ರಣಾಳಿಕೆಯು ಮಹಿಳೆಯ ಸಬಲೀಕರಣ, ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವಂತಹ ಪ್ರಣಾಳಿಕೆಯಾಗಿದೆ. ಯುವ ಸಮುದಾಯ ಬಡವರ ಅಭಿವೃದ್ದಿಗೆ ಒತ್ತು ನೀಡಲಾಗಿದೆ. ಕರ್ನಾಟಕದಲ್ಲಿ ಅಭಿವೃದ್ದಿಗೆ ಬ್ಲೂ ಪ್ರಿಂಟ್ ರೆಡಿ ಮಾಡಿದ್ದೇವೆ. ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಯೋಜನೆ ಜಾರಿ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಬಾಹ್ಯದಿಂದ ಬೇರೆ ಬೇರೆ ಪಕ್ಷಗಳಂತೆ ಕಂಡರೂ, ಆಂತರಿಕವಾಗಿ ಒಂದೇಯಾಗಿವೆ. ಎರಡು ಪಕ್ಷಗಳು ಕುಟುಂಬ ರಾಜಕಾರಣ, ಭ್ರಷ್ಟಾಚಾರ ಮಾಡುತ್ತಿವೆ. ಸಮಾಜವನ್ನು ಒಡೆಯುತ್ತಿವೆ. ಅವುಗಳಿಂದ ರಾಜ್ಯದ ಅಭಿವೃದ್ದಿಯಾಗಲ್ಲ ಎಂದು ಪ್ರಧಾನಿ ಮೋದಿ ಗುಡುಗಿದರು.
ಚಿತ್ರದುರ್ಗದಲ್ಲಿ ಯಾವುದೇ ಕಾಮಗಾರಿ ಪೂರ್ಣಗೊಳಿಸಿರಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಎಲ್ಲಾ ಯೋಜನೆಗಳು ಪೂರ್ಣಗೊಳ್ಳಲಿವೆ. ಕಾಂಗ್ರೆಸ್ ಜೆಡಿಎಸ್ ಅಧಿಕಾರದಲ್ಲಿದ್ದಾಗ ಅಭಿವೃದ್ದಿ ಆಗಿಲ್ಲ. ಕಾಂಗ್ರೆಸ್ ನವರು ಭದ್ರಾ ಮೇಲ್ದಂಡೆ ಯೋಜನೆ ಕಡೆಗಣನೆ ಮಾಡಿದರು. ನಾವು ಭದ್ರ ಮೇಲ್ದಂಡೆ ಯೋಜನೆ ಮಾಡುತ್ತೇವೆ. ಇದೇ ಯೋಜನೆಯಿಂದ ನೂರಾರು ಜನರಿಗೆ ಅನುಕೂಲವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.