ಅಪ್ಪ ಎಂದರೆ ಸ್ಫೂರ್ತಿಯ ಚಿಲುವೆ ಫಿನಿಕ್ಸ್ ಫಿಟ್‌ನೆಸ್ ಕ್ಲಬ್ ಅಧ್ಯಕ್ಷೆ ಡಿ.ಸುಜಾತ
ದಾವಣಗೆರೆ.ಜೂ.19; ಅಪ್ಪ ಪ್ರತಿಯೊಬ್ಬರ ಜೀವನದ ಶಕ್ತಿ ಮತ್ತು ಸ್ಫೂರ್ತಿಯ ಚಿಲುಮೆ ಆಗಿರುತ್ತಾರೆ ಎಂದು ಫಿನಿಕ್ಸ್ ಫಿಟ್‌ನೆಸ್ ಕ್ಲಬ್ ಅಧ್ಯಕ್ಷೆ ಡಿ.ಸುಜಾತ ಹೇಳಿದರು.
ನಗರದ ಎಸ್‌ಎಸ್ ಬಡಾವಣೆಯ ಬಿ ಬ್ಲಾಕಿನಲ್ಲಿರುವ ಕ್ಲಬ್ಬಿನ ಆವರಣದಲ್ಲಿ ಭಾನುವಾರ ಕೈ ಬರಹ ಸ್ಪರ್ಧೆ ಮತ್ತು ವಿಶ್ವ ಅಪ್ಪಂದಿರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಜೀವನದಲ್ಲಿ ತಂದೆ ಅಥವಾ ತಂದೆ ವಯಸ್ಸಿನ ವ್ಯಕ್ತಿಗಳನ್ನು ಗೌರವಿಸಲು ತಂದೆಯ ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ. ತನ್ನ ಮಕ್ಕಳಿಗಾಗಿ ತಂದೆ ತೋರಿದ ಪ್ರೀತಿ, ಗೌರವ, ಬೋಧನೆಗಳು ಮತ್ತು ತ್ಯಾಗ ನೆನಪಿಸುವ ದಿನವಿದು. ಅವರು ತಮ್ಮ ಕುಟುಂಬದ ಶಕ್ತಿಯ ಆಧಾರ ಸ್ತಂಭವಾಗಿ ಕಾರ್ಯ ನಿರ್ವಹಿಸುತ್ತಾರೆ. ಮಕ್ಕಳು ಹಾಗೂ ಅಪ್ಪನ ನಡುವಿನ ಪ್ರೀತಿಯ ಸಂಕೇತವಾಗಿ ಜೂನ್ 19ರಂದು ವಿಶ್ವ ಅಪ್ಪಂದಿರ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಹೇಳಿದರು.
ಪ್ರತಿಯೊಬ್ಬರಿಗೂ ಸಮಾಜದಲ್ಲಿ ಅಸ್ತಿತ್ವವನ್ನು ಒದಗಿಸಿಕೊಟ್ಟವರು ಅಪ್ಪ. ಅಪ್ಪ ಅಮ್ಮನಂತೆ ಸಲುಗೆಯಿಂದ ಇರುವುದು ತುಂಬಾ ಕಡಿಮೆ. ಹೀಗಾಗಿ ಅಪ್ಪನಿಗೆ ಸಲ್ಲಬೇಕಾದ ಪ್ರೀತಿಯ ಪಾಲು ಕೂಡ ಅಮ್ಮನತ್ತವೇ ಹರಿದು ಬಿಡುತ್ತದೆ. ಮಕ್ಕಳ ಭವಿಷ್ಯಕ್ಕಾಗಿ ಶಿಸ್ತಿನ ಸಿಪಾಯಿಯ ಪಾತ್ರ ನಿರ್ವಹಿಸುವ ಅವರು ಜೀವನದುದ್ದಕ್ಕೂ ಕೊಂಚ ಗಡುಸಾಗಿಯೇ ಕಾಣಿಸುತ್ತಾರೆ. ಆದರೆ ಅವರಲ್ಲೂ ಆಕಾಶದಷ್ಟು ಪ್ರೀತಿ, ವಾತ್ಸಲ್ಯ ಇರುತ್ತದೆ. ಅಪ್ಪನ ಪ್ರೀತಿ ಅಮ್ಮನಷ್ಟೇ ವಿಶಾಲವಾದದ್ದು ಎಂದು ಬಣ್ಣಿಸಿದರು.
ಅಮ್ಮ ಎನ್ನುವ ದೇವತೆ ಹೊತ್ತು, ಹೆತ್ತು ಹಾಲನ್ನಿತ್ತು ಬೆಳೆಸಿದರೆ, ಅಪ್ಪ ಅನ್ನೋ ಜೀವ ಮಗುವಿಗೆ ಬಲ ತುಂಬುತ್ತದೆ, ರಕ್ಷಣೆ ಒದಗಿಸುತ್ತದೆ. ಮೌನವಾಗಿಯೇ ನಮ್ಮೆಲ್ಲ ಜವಾಬ್ದಾರಿಯನ್ನು ಹೊರುವ ಅಪ್ಪ ಮಳೆ, ಚಳಿ, ಗಾಳಿ ಎನ್ನದೇ ನಮಗಾಗಿ ಬೆವರು ಸುರಿಸುತ್ತಾರೆ. ನಿದ್ದೆಗೆಡುತ್ತಾರೆ. ನಿಮಗಾಗಿ ಬದುಕು ತೆತ್ತೆ ಎನ್ನದ ಅಪ್ಪ ಸದಾ ನಮಗಾಗಿಯೇ ಹೆಣಗಾಡುತ್ತಾರೆ ಬದುಕು ರೂಪಿಸಿದ, ಜೀವನ ಪಾಠ ಕಲಿಸಿದ, ಕಿರು ಬೆರಳ ಹಿಡಿದು ಮುನ್ನಡೆಸಿದ ಅಕ್ಕರೆಯ ಅಪ್ಪನಿಗೊಂದು ಕೃತಜ್ಞತೆ ಹೇಳುವ ದಿನವನ್ನು ನಾವೆಲ್ಲರೂ ಸದಾ ನೆನೆಪಿನಲ್ಲಿ ಇಟ್ಟುಕೊಳ್ಳಬೇಕು ಎಂದರು.
ಕೈ ಬರಹ ಕುರಿತು ಮಾತನಾಡಿದ ಅವರು, ಕೈ ಬರಹ ಕಲೆ ಮನುಷ್ಯನ ಜೀವನವನ್ನು ರೂಪಿಸುತ್ತದೆ. ಕೈ ಬರಹ ಕೂಡ ಅದ್ಭುತವಾದ ಕಲೆ. ಇದರಿಂದ ಒಬ್ಬ ವ್ಯಕ್ತಿಯ ಭಾವನೆ, ಸ್ವಭಾವ, ಮಾನಸಿಕ ಸ್ಥಿತಿಗತಿಗಳನ್ನು ಅಳೆಯಬಹುದು ಎಂದು ಹೇಳಿದರು.
ಕೈ ಬರಹ ಸ್ಪರ್ಧೇಯಲ್ಲಿ 25 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಪೈಕಿ 6 ಜನರು ಪ್ರಥಮ, 11 ದ್ವಿತೀಯ ಸ್ಥಾನ ಪಡೆದುಕೊಂಡರು. ನಿವೃತ್ತ ಇಂಜಿನಿಯರ್ ಶಿವಯೋಗಪ್ಪ ಮಕ್ಕಳಿಗೆ ಬಹುಮಾನ ವಿತರಿಸಿದರು. ಪ್ರಥಮ ಸ್ಥಾನ ವಿಜೇತರಿಗೆ ಪ್ರಶಸ್ತಿ ಮತ್ತು ಪದಕ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕ್ಲಬ್ಬಿನ ಪ್ರಸನ್ನಕುಮಾರ್, ಜ್ಯೋತಿ, ಲತಾ ಇತರರು ಉಪಸ್ಥಿತರಿದ್ದರು.
———-