ಧಾರವಾಡ ಹಾಗೂ ವಿಜಯಪುರ ಶಾಸಕರು ಸಿಎಂ ಆಗುವ ತಿರುಕನ ಕನಸು ಕಾಣುತ್ತಿದ್ದಾರೆ – ರೇಣುಕಾಚಾರ್ಯ
ದಾವಣಗೆರೆ: ಸಿಎಂ ಯಡಿಯೂರಪ್ಪ ಅವರ ನಾಯಕತ್ವದ ವಿರುದ್ಧ ಖ್ಯಾತೆ ತೆಗೆದವರ ವಿರುದ್ದ ಸಹಿ ಸಂಗ್ರಹಿಸಿದ್ದು ಸತ್ಯವಾಗಿದ್ದು, ವರಿಷ್ಠರು ಇದನ್ನ್ ಸಹಿಸುವುದಿಲ್ಲ ಎಂದು ಯಡಿಯೂರಪ್ಪ ಅವರೇ ತಮಗೆ ಹೇಳಿದಕ್ಕೆ ಸುಮ್ಮನಾಗಿದ್ದೇವೆ. ಬಿಎಸ್ ವೈ ನಾಯಕತ್ವದಲ್ಲಿ ಯಾವುದೇ ಬದಲಾವಣೆಯೂ ಇಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಹೊನ್ನಾಳಿ ತಾಲೂಕಿನ ಅರಬಗಟ್ಟ ಕೋವಿಡ್ ಕೇರ್ ಸೆಂಟರ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಎಸ್ ವೈ ಪರವಾಗಿ 65 ಶಾಸಕರ ಸಹಿಸಂಗ್ರಹಿಸಿದ್ದು ಸತ್ಯ. ಸಿಎಂ ಹಾಗೂ ಪಕ್ಷದ ವರಿಷ್ಠರು ಹೇಳಿದ್ದಕ್ಕೆ ಸುಮ್ಮನಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಧಾರವಾಡ ಹಾಗೂ ವಿಜಯಪುರ ಶಾಸಕರು ಸಿಎಂ ಆಗುವ ತಿರುಕನ ಕನಸು ಕಾಣುತ್ತಿದ್ದಾರೆ. ಈಗಾಗಲೇ ನನಗೆ ಪಕ್ಷ ದ ರಾಜ್ಯ ಉಸ್ತುವಾರಿಗಎ ಗಳು ಭೇಟಿ ಸಮಯ ನೀಡಿದ್ದಾರೆ. ಮೇಲಾಗಿ ನಮ್ಮ ಎಲ್ಲ ಶಾಸಕರು ಒಟ್ಟಾಗಿ ಉಸ್ತುವಾರಿಗೆ ಮನವರಿಕೆ ಮಾಡಿ ಕೊಡುತ್ತೇವೆ ಎಂದರು. ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಸಾಧ್ಯವೆ ಇಲ್ಲ. ಯಾರೋ ಇಬ್ಬರು ಮೂರು ಜನ ದೆಹಲಿಗೆ ಹೋಗಿ ವರಿಷ್ಠರ ಮನೆ ಗೇಟ್ ಮುಟ್ಟಿ ಬಂದರೆ ಬದಲಾವಣೆ ಅಸಾದ್ಯ. ಅವರು ಕೇಳಿದರೆ ವೈಯಕ್ತಿಕ ಕೆಲಸಕ್ಕೆ ಹೋಗಿದ್ದೆವು ಎನ್ನುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೋವಿಡ್ ನ ಈ ಸಂದರ್ಭದಲ್ಲಿ ನಮ್ಮ ಶಾಸಕರು, ಸಚಿವರುಗಳು ಜನರಿಗೆ ಸ್ಪಂದಿಸುವ, ಜನಸೇವೆ ಮಾಡುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ನಮ್ಮ ಪಕ್ಷದ ನಾಯಕತ್ವದ ಬಗ್ಗೆಯೇ ದೂರುವುದು ಸರಿಯಲ್ಲ. ಯಡಿಯೂರಪ್ಪ ಅವರ ಅನುಭವದಷ್ಟು ಇವರಿಗೆ ವಯಸ್ಸಾಗಿಲ್ಲ ಎಂದು ಕಿಡಿಕಾರಿದರು.