ಪಾದಚಾರಿ ಮಾರ್ಗದ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡಿದ್ರೆ ಕ್ರಿಮಿನಲ್ ಪ್ರಕರಣ ದಾಖಲು
ದಾವಣಗೆರೆ: ಪಾದಚಾರಿ ಮಾರ್ಗ ಅಥವಾ ರಸ್ತೆಗಳಲ್ಲಿ ಅನಧಿಕೃತವಾಗಿ ವಾಹನ ನಿಲುಗಡೆ ಮಾಡಿರುವ ಕುರಿತು ನಾಗರೀಕರು ದೂರು ನೀಡಿದರೆ ಅಗತ್ಯ ಕಾನೂನು ರೀತಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಪೊಲೀಸ್ ಇಲಾಖೆಗೆ ಸರ್ಕಾರ ನಿರ್ದೇಶನ ನಿಡುವಂತೆ ನ್ಯಾಯಾಲಯ ಹೇಳಿದೆ. ಆದೇಶಿಸಿದೆ.
ಪಾದಚಾರಿ ರಸ್ತೆ ಇರುವುದು ಪಾದಚಾರಿಗಳು ಯಾವುದೇ ಅಡೆತಡೆ ಇಲ್ಲದೆ ಸುರಕ್ಷಿತವಾಗಿ ನಡೆದಾಡುವುದಕ್ಕಾಗಿ. ಅಲ್ಲಿ ವಾಹನಗಳ ನಿಲುಗಡೆ ಮಾಡುವುದು ಅಕ್ರಮ ಮತ್ತು ಕಾನೂನುಬಾಹಿರವಾಗಿದ್ದು, ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಉಚ್ಛ ನ್ಯಾಯಾಲಯವು ಆದೇಶಿಸಿದ್ದು, ಆದೇಶವನ್ನು ಪಾಲನೆ ಮಾಡುವಂತೆ ಸರ್ಕಾರದ ಅಧೀನ ಕಾರ್ಯದರ್ಶಿ (ಕಾನೂನು ಮತ್ತು ಸುವ್ಯವಸ್ಥೆ) ಎಂ.ಆರ್ ಶೋಭಾ ಸೂಚನೆ ನೀಡಿದ್ದಾರೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಉಚ್ಚ ನ್ಯಾಯಾಲಯವು, ಕಳೆದ ಏ. 21 ರಂದು ಈಆದೇಶ ಹೊರಡಿಸಿದ್ದು, ಪಾದಚಾರಿ ಮಾರ್ಗಗಳ ಮೇಲೆ ವಾಹನ ನಿಲುಗಡೆ ಮಾಡಿದವರ ವಿರುದ್ಧ ದಂಡನಾ ಕ್ರಮವನ್ನು ಕೈಗೊಳ್ಳಲು ಸಂಬಂಧಿಸಿದವರಿಗೆ ಸೂಕ್ತ ಆದೇಶ ನೀಡಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಸಾರ್ವಜನಿಕರು ಸಂಚಾರಕ್ಕೆ ಅಡ್ಡಿಯಾಗುವಂತೆಯೂ ಪಾರ್ಕಿಂಗ್ ಮಾಡುವಂತಿಲ್ಲ. ಈ ನಿಯಮ ಉಲ್ಲಂಘಿಸಿದವರ ವಿರುದ್ಧ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಹಾಗೂ ಪೊಲೀಸರು ಮೋಟಾರು ವಾಹನ ಕಾಯಿದೆ ಮತ್ತು ಭಾರತೀಯ ದಂಡ ಸಂಹಿತೆಯಡಿ ಕಾನೂನು ಕ್ರಮ ಕೈಗೊಳ್ಳಲು ಸಂಚಾರ ಪೊಲೀಸರು ತಿಳಿಸಿದೆ ಎಂದವರು ಹೇಳಿದ್ದಾರೆ.