ಹೆದ್ದಾರಿ ಪಕ್ಕದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ‘ಯಂಗ್ ಸ್ಟಾರ್ ಗ್ಯಾಂಗ್’ ಬಂಧಿಸಿದ ದಾವಣಗೆರೆ ಪೋಲೀಸ್
ದಾವಣಗೆರೆ: ದಾವಣಗೆರೆ ನಗರದ ಹೊರವಲಯದ ಮನೆಗಳನ್ನು ಟಾರ್ಗೇಟ್ ಮಾಡಿ ದರೋಡೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಪೊಲೀಸರು 25.75 ಲಕ್ಷ ವೌಲ್ಯದ ನಗದು ಸಹಿತ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಗೋವಿಂದ ಬಡಾವಣೆ ನಿವಾಸಿಗಳಾದ ಮಾರುತಿ, ಶಿವರಾಜ್ ಲಮಾಣಿ, ಸುನೀಲ್ ಲಮಾಣಿ, ಮನೋಜ್ ಲಮಾಣಿ, ಅಭಿಷೇಕ ಹಾಗೂ ಮಹಾಂತೇಶ ಬಂಧಿತ ಆರೋಪಿಗಳಾಗಿದ್ದು, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಡಾಲರ್ಸ್ ಕಾಲೋನಿಯ ಡಾ.ತಿಪ್ಪೇಸ್ವಾಮಿ ಎಂಬ ವೈದ್ಯರು ಜೂನ್ 4 ರಂದು ಮನೆಗೆ ಬೀಗ ಹಾಕಿಕೊಂಡು ಸಂಬಂಧಿಕರ ಮದುವೆಗೆ ತೆರಳಿದ್ದರು. ಮನೆಯ ಬೀಗ ಮುರಿದಿರುವ ಕಳ್ಳರು ಸುಮಾರು 31 ಲಕ್ಷ ರೂಪಾಯಿ ವೌಲ್ಯದ ಚಿನ್ನ, ಬೆಳ್ಳಿ ಕಳ್ಳತನ ಮಾಡಿದ್ದರು. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಡಾ. ತಿಪ್ಪೇಸ್ವಾಮಿ ದೂರು ದಾಖಲಿಸಿದ್ದರು.
ಈ ಪ್ರಕರಣದ ಬೆನ್ನತ್ತಿದ್ದ ಪೊಲೀಸರಿಗೆ ಹೆದ್ದಾರಿ ಬಡಾವಣೆಗಳಲ್ಲಿ ಬೀಗ ಹಾಕಿದ ಮನೆಗಳನ್ನು ಟಾರ್ಗೇಟ್ ಮಾಡುತ್ತಿದ್ದ ಆರು ಜನರ ಗ್ಯಾಂಗ್ ಪತ್ತೆ ಹಚ್ಚಿದ್ದಾರೆ. ಇವರಿಂದ 25.75 ಲಕ್ಷ ವೌಲ್ಯದ ನಗದು ಸಹಿತ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಈ ಗ್ಯಾಂಗ್ ಹೆಸರು ಯಂಗ್ ಸ್ಟಾರ್ ಗ್ಯಾಂಗ್ ಎಂದು ಇಟ್ಟುಕೊಂಡಿದ್ದಾರೆ. ಈ ಗ್ಯಾಂಗ್ ಮೂರು ನಾಲ್ಕು ದಿನ ಹೆದ್ದಾರಿ ಪಕ್ಕದ ಜನ ವಸತಿ ಪ್ರದೇಶದಲ್ಲಿ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಬೈಕ್ ಹಿಂದೆ ಮಹಿಳೆಯರನ್ನು ಕುರಿಸಿಕೊಂಡು ಸುತ್ತಾಡಿ ಯಾರು ಎಲ್ಲಿಗೆ ಹೋಗುತ್ತಾರೆ, ಯಾರ ಮನೆ ಬೀಗ ಹಾಕಿದೆ, ಎಂಬ ಮಾಹಿತಿ ಪಡೆದು ಗ್ಯಾಂಗ್‌ಗೆ ಮಾಹಿತಿ ನೀಡುತ್ತಾರೆ. ಬಳಿಕ ಗ್ಯಾಂಗ್ ತಡ ರಾತ್ರಿ ಬಂದು ದಾಳಿ ಮಾಡಿ, ಜೊತೆಗೆ ಒಂಟಿ ಮಹಿಳೆಯರ ಚಿನ್ನದ ಸರ ಕಿತ್ತುಕೊಂಡು ಹೋಗುವ ಪ್ರಕರಣಗಳಲ್ಲಿ ಇವರ ಕೈಚಳಕ ಇದೆ ಎಂಬುದು ತನಿಖೆ ನಂತರ ಗೊತ್ತಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನಿಂದ ಬೆಳಗಾವಿ ಯವರೆಗೆ ರಾಷ್ತ್ರೀಯ ಹೆದ್ದಾರಿ ಪಕ್ಕದ ಮನೆಗಳ ಮೇಲೆ ಇವರು ಪೊಲೀಸರಿಗಿಂತ ಹೆಚ್ಚಾಗಿ ನಿಗಾ ವಹಿಸಿ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಕಳ್ಳತನ ಮಾಡುತ್ತಾರೆ. ಕಳ್ಳತನದ ಜೊತೆಗೆ ಸಿಸಿ ಕ್ಯಾಮರ ಡಿವಿಆರ್ ತೆಗೆದುಕೊಂಡು ಹೋಗುತ್ತಿದ್ದರು. ಈ ದರೋಡೆಕೋರರ ತಂಡವನ್ನು ದಾವಣಗೆರೆ ಪೋಲೀಸರು ಬಂಧಿಸಿದ್ದಾರೆ.