ದುರ್ಗಾಂಭಿಕಾ ಜಾತ್ರೆ ಪ್ರಾಣಿಬಲಿ ಮುಕ್ತವಾಗಲಿ : ಬಸವ ಧರ್ಮ ಜ್ಞಾನಪೀಠದ ಅಧ್ಯಕ್ಷ ದಯಾನಂದ ಸ್ವಾಮೀಜಿ
ದಾವಣಗೆರೆ : ರಾಜ್ಯ ಹೈಕೋರ್ಟ್ ಆದೇಶದನ್ವಯ ದಾವಣಗೆರೆ ನಗರದಲ್ಲಿ ನಡೆಯುತ್ತಿರುವ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆಯಲ್ಲಿ ಕೋಣ, ಆಡು, ಕುರಿ, ಕೋಳಿ ಮುಂತಾದ ಪ್ರಾಣಿಗಳ ಬಲಿ ತಡೆಗೆ ರಾಜ್ಯ ಸರ್ಕಾರ ಸೇರಿದಂತೆ ದಾವಣಗೆರೆ ಜಿಲ್ಲಾಡಳಿತ, ಪೊಲೀಸ್ ಇಲಾಖೆಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಪಶು ಪ್ರಾಣಿ ಬಲಿ ನಿರ್ಮೂಲನ ಜಾಗೃತಿ ಮಹಾಸಂಘ ಮತ್ತು ಬಸವ ಧರ್ಮ ಜ್ಞಾನಪೀಠದ ಅಧ್ಯಕ್ಷ ದಯಾನಂದ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮಾರ್ಚ್ 15 ಮತ್ತು 16 ರಂದು ದಾವಣಗೆರೆಯ ನಗರ ದೇವತೆ ದುರ್ಗಾಂಬಿಕಾ ದೇವಸ್ಥಾನ ದೇವಿಯ ಜಾತ್ರೆ ಇದೆ. ಈ ವೇಳೆ ಸಾವಿರಾರು ಕುರಿ ಕೋಣ ಕೋಳಿ ಆಡುಗಳನ್ನು ಬಲಿ ನೀಡಲಾಗುತ್ತದೆ. ಪ್ರಾಣಿಬಲಿ ಮಾಡದೆ ಜೀವ ಹಿಂಸೆ ತ್ಯಜಿಸಿ ಸಾತ್ವಿಕ ಅಹಿಂಸಾತ್ಮಕ ಪೂಜಾದಿ ಧಾರ್ಮಿಕ ಕಾರ್ಯಕ್ರಮಗಳನ್ನು ಮೈಗೂಡಿಸಿಕೊಂಡು ಪೂಜಾ ಕೈಂಕರ್ಯಗಳನ್ನು ಸಲ್ಲಿಸುವಂತೆ ಭಕ್ತರಲ್ಲಿ ಮತ್ತು ದೇವಾಲಯ ಹಾಗೂ ಜಾತ್ರೆಯ ಸಮಿತಿಯಲ್ಲಿ ಮನವಿ ಮಾಡಲಾಗುವುದು ಎಂದು ಹೇಳಿದರು.
ಇದಲ್ಲದೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಬೇಲಿಮಲ್ಲೂರು ಕೋಟೆಹಾಳು ಗ್ರಾಮದಲ್ಲಿ ಮಾರಮ್ಮದೇವಿ ಜಾತ್ರೆ ನಡೆಯಲಿದ್ದು ಇಲ್ಲೂ ಸಹ ಕೋಣ ಕೋಣ ಸೇರಿದಂತೆ ಮತ್ತಿತರ ಪ್ರಾಣಿಗಳನ್ನು ಬಲಿ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ತಾಲ್ಲೂಕು ಆಡಳಿತಕ್ಕೆ ಸೂಕ್ತ ನಿರ್ದೇಶನ ನೀಡಿ ಅಲ್ಲಿ ನಡೆಯುವ ಪ್ರಾಣಿ ಬಲಿಗಳನ್ನು ತಡೆಗಟ್ಟುವಂತೆ ಒತ್ತಾಯಿಸಲಾಗುವುದು. ಪ್ರಾಣಿಬಲಿ ತಡೆಗಾಗಿ ದಾವಣಗೆರೆ ನಗರ ನಗರದಲ್ಲಿ ಹಾಗೂ ಹೊನ್ನಾಳಿ ತಾಲ್ಲೂಕಿನಲ್ಲಿ ಜಾತ್ರೆ ಮುಗಿಯುವವರೆಗೂ ಅಹಿಂಸಾ ಪ್ರಾಣಿದಯಾ ಆಧ್ಯಾತ್ಮ ಸಂದೇಶ ಯಾತ್ರೆಗಳನ್ನು ನಡೆಸಲಾಗುವುದು. ದಾವಣಗೆರೆ ಜಿಲ್ಲೆಯ ಯಾವುದೇ ಕಡೆಗಳಲ್ಲಿ ಪ್ರಾಣಿ ಬಲಿ ನಡೆಯದಂತೆ ಡಿಸಿ, ಎಸ್ಪಿ, ಪಿಎಸ್‌ಐಗಳಿಗೆ ರಾಜ್ಯ ಉಚ್ಚ ನ್ಯಾಯಾಲಯ ಆದೇಶ ನೀಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಬೇಕು. ಒಂದು ವೇಳೆ ಪ್ರಾಣಿ ಬಲಿ ನಡೆದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು. ದಾವಣಗೆರೆ ದುಗ್ಗಮ್ಮ ದೇವಿ ಜಾತ್ರೆಯು ಪ್ರಾಣಿಬಲಿ ಮುಕ್ತ, ರಕ್ತ ಮುಕ್ತ, ಹಿಂಸಾಮುಕ್ತ ಆಗಬೇಕು. ಇಂತಹ ಅಮಾನವೀಯ ಪದ್ದತಿ ಕೊನೆ ಅಗಬೇಕು ಎಂದರು.
ರಾಜ್ಯದಲ್ಲಿ ಯಾವುದೇ ವಯಸ್ಸಿನ ಹಸು, ಆಕಳು, ಎತ್ತು, ಹೋರಿ, ಕರುಗಳು, 13 ವರ್ಷದ ಒಳಗಿನ ಎಮ್ಮೆ, ಕೋಣಗಳನ್ನು ಯಾರೇ ಆಗಲಿ, ಯಾವುದೇ ಕಾರಣಕ್ಕೆ ಎಲ್ಲಿಯೂ ಹತ್ಯೆ ಮಾಡುವಂತಿಲ್ಲ. ಒಂದು ವೇಳೆ ಕಾನೂನನ್ನು ಉಲ್ಲಂಘಿಸಿದರೆ 3ರಿಂದ 7ವರ್ಷ ಜೈಲು ಶಿಕ್ಷೆ, 50 ಸಾವಿರದಿಂದ 10 ಲಕ್ಷದವರೆಗೆ ದಂಡ ವಿಧಿಸುವಂತೆ ರಾಜ್ಯ ಉಚ್ಚ ನ್ಯಾಯಾಲಯ ತಿಳಿಸಿದೆ. ಈ ಬಗ್ಗೆ ಸಂಬಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಸುನಂದಾ ದೇವಿ ಇದ್ದರು.