ಅಸ್ಪೃಶ್ಯತೆ ವಿರುದ್ಧ ಶ್ರೀರಾಮ ಸೇನೆ ಆಂದೋಲನ :ಶ್ರೀ ರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್
ದಾವಣಗೆರೆ: ಭಾರತದಾದ್ಯಂತ ಹಬ್ಬಿರುವ ಅಸ್ಪೃಶ್ಯತೆ ವಿರುದ್ದ ದೊಡ್ಡ ಆಂದೋಲನ ಹಮ್ಮಿಕೊಳ್ಳಲು ಶ್ರೀರಾಮ ಸೇನೆ ಸಂಕಲ್ಪ ಮಾಡಿದೆ ಎಂದು ಶ್ರೀ ರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು. ನಗರದ ಸದ್ಯೋಜಾತ ಮಠದಲ್ಲಿ ಶ್ರೀರಾಮ ಸೇನೆಯಿಂದ ನಡೆದ ಹಿಂದೂವಾದಿ, ರಾಷ್ಟçವಾದಿ ಹಿಂದುಳಿದವರ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದು ಧರ್ಮದಲ್ಲಿರುವ ಮೇಲು-ಕೀಳು ಎಂಬ ಲೋಪ ಸರಿಪಡಿಸಿ, ಅಸ್ಪೃಶ್ಯತೆ, ದಲಿತರು ಜೊತೆಯಾಗಿ ಕರೆದುಕೊಂಡು ಹೋಗಲು ಈ ಸಮಾವೇಶ ನಡೆಸಲಾಗುತ್ತಿದೆ ಎಂದರು. ಸಾವಿರಾರು ವರ್ಷಗಳ ಹಿಂದೆ ದೇಶದಲ್ಲಿ ಅಸ್ಪೃಶ್ಯತೆ ಇರಲಿಲ್ಲ. ಆದರೆ, ನಮ್ಮನ್ನು ಆಳಿದ ಮುಸ್ಲಿಮರು, ಬ್ರಿಟಿಷರು, ಹಿಂದುಗಳಲ್ಲಿರುವ ಸಮಾನತೆ, ಏಕತೆಯನ್ನು ಹೊಡೆಯಲು ಅಸ್ಪೃಶ್ಯತೆಯನ್ನು ಹುಟ್ಟು ಹಾಕಿದರು. ಒಂದು ಮನೆಯಲ್ಲಿ ನಾಲ್ಕೈದು ಜನ ಮಕ್ಕಳಿದ್ದರೆ ಅವರಲ್ಲೊಬ್ಬ ದುರ್ಬಲನಾಗಿದ್ದರೆ ತಾಯಿ ದುರ್ಬಲ ಇರುವ ಮಗುವಿನ ಮೇಲೆ ಹೆಚ್ಚು ಅಕ್ಕರೆ ತೋರಿಸುತ್ತಾಳೆ. ಹಾಗಾಂತ, ಅವರನ್ನು ಪ್ರತ್ಯೇಕವಾಗಿ ಇಡುವುದು ಸರಿಯಲ್ಲ. ನಾವೆಲ್ಲರೂ ಭಾರತಾಂಬೆಯ ಮಕ್ಕಳು ಎಂದರು.
ಬ್ರಿಟಿಷರು ಮತ್ತು ಮುಸ್ಲಿಮರು ಹುಟ್ಟು ಹಾಕಿದ ಅಸ್ಪೃಶ್ಯತೆಯನ್ನು ಸ್ವಾತಂತ್ರದ ನಂತರ ದೇಶವಾಳಿದ ರಾಜಕಾರಣಿಗಳು ಹೋಗಲಾಡಿಸಲು ಪ್ರಯತ್ನಪಡಲಿಲ್ಲ. ಕೇವಲ ಮತ ಬ್ಯಾಂಕ್‌ಗಳಿಗೆ ದಲಿತರು, ಹಿಂದುಳಿದ ವರ್ಗದವರನ್ನು ಪ್ರತ್ಯೇಕವಾಗಿ ಇಡುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಈ ಅಸಮಾನತೆ ಹೋಗಲಾಡಿಸುವಲ್ಲಿ ಎಲ್ಲಾ ರಾಜಕೀಯ ಪಕ್ಷಗಳು, ಹೋರಾಟಗಾರರು ವಿಫಲರಾಗಿದ್ದಾರೆ. ನಗರ ಪ್ರದೇಶಗಳಲ್ಲಿ ದಲಿತರಿಗೆ, ಹಿಂದುಳಿದವರಿಗೆ ಬಾಡಿಗೆ ಮನೆ ಸಹ ಕೊಡುವುದಿಲ್ಲ. ಬ್ಯಾರಿಸ್ಟರ್ ಆಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ಸಹ ಈ ಅಸ್ಪೃಶ್ಯತೆಯ ಕೌರ್ಯವನ್ನು ಅನುಭವಿಸಿದ್ದಾರೆ. ಹೀಗಾಗಿ, ಅಂಬೇಡ್ಕರ್ ಸ್ಥಾನದಲ್ಲಿ ನಿಂತು ಅಸ್ಪೃಶ್ಯತೆ ನೋಡಬೇಕು ಎಂದರು.
ಅಸ್ಪೃಶ್ಯತೆಯನ್ನು ಮುಸ್ಲಿಮರು, ಕಮ್ಯೂನಿಸ್ಟ್ಟರು, ಬುದ್ದಿಜೀವಿಗಳು ಒಂದು ದಾಳವನ್ನಾಗಿ ಬಳಕೆ ಮಾಡುತ್ತಿದ್ದಾರೆ. ಆ ವರ್ಗದ ಜನರನ್ನು ಮೇಲೇತ್ತುವ ಪ್ರಯತ್ನ ಮಾಡುತ್ತಿಲ್ಲ. ಹೀಗಾಗಿ, ಶ್ರೀರಾಮ ಸೇನೆ ಅಸ್ಪೃಶ್ಯರನ್ನು ಜೊತೆಗೆ ಕೊಂಡೊಯ್ಯುವ ಸಂಕಲ್ಪ ಮಾಡಿದೆ. ಅಲ್ಲದೇ ಕ್ರೈಸ್ತರ ಮತಾಂತರ ಮತ್ತು ಮುಸ್ಲಿಮರ ಆಟೋಪಗಳಿಗೆ ಕಡಿವಾಣ ಹಾಕಲು ಸಂಘಟನೆಯನ್ನು ಸಜ್ಜುಗೊಳಿಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಗೌರವಾಧ್ಯಕ್ಷ ಕಾಳಿಮಠದ ಶ್ರೀ ಋಷಿಕುಮಾರ ಸ್ವಾಮೀಜಿ, ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಆನಂದ್ ಅಡ್ಡಿಯಾರ್, ಪ್ರಮೋದ್, ಜಿಲ್ಲಾಧ್ಯಕ್ಷ ಮಣಿ ಸರ್ಕಾರ್, ರಾಜ್ಯ ಕಾರ್ಯದರ್ಶಿ ಪರಶುರಾಮ್ ನಡುಮನಿ ಇನ್ನಿತರರಿದ್ದರು.