Gambling:ದಾವಣಗೆರೆ DCRB ಪೊಲೀಸ್ ಆಕ್ಟಿವ್, ಅಕ್ರಮ ಚಟುವಟಿಕೆ ಕಡಿವಾಣಕ್ಕೆ ಖಡಕ್ ಸೂಚನೆ ರವಾನಿಸಿದ ಎಸ್ ಪಿ ರಿಷ್ಯಂತ್
ದಾವಣಗೆರೆ: ಏಕಕಾಲಕ್ಕೆ ಜಿಲ್ಲೆಯ ವಿವಿಧ ಹತ್ತು ಕಡೆಗಳಲ್ಲಿ ದಾಳಿ ನಡೆಸಿರುವ ಪೊಲೀಸರು, ಇಸ್ಪೀಟ್, ಮಟ್ಕಾ ಜೂಜಾಟವಾಡುತ್ತಿದ್ದ 37 ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ ಒಟ್ಟಾರೆ ₹ 12,13,400 ನಗದು ಹಾಗೂ 4 ಕಾರು, ನಾಲ್ಕು ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ.
ನ್ಯಾಮತಿ ಪೊಲೀಸ್ ಠಾಣೆ ವ್ಯಾಪ್ತಿಯ ಮದಾಪುರ ಗ್ರಾಮದಲ್ಲಿ 6, ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಟಿವಿ ಸ್ಟೇಷನ್ ಬಳಿ 12, ಆಜಾದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಭಾಷಾ ನಗರ ಹಾಗೂ ಆಜಾದ್ ನಗರದಲ್ಲಿ 2, ಹರಿಹರ ನಗರ ಠಾಣಾ ವ್ಯಾಪ್ತಿಯ ಹರಿಹರ ನಗರದಲ್ಲಿನ ಲಲಿತಾ ಪ್ಯಾಲೆಸ್ ನಲ್ಲಿ 12, ಮಲೆಬೆನ್ನೂರು ಟೌನ್ ನ ಬನ್ನಿ ಮಂಟಪ ಸರ್ಕಲ್ ಮತ್ತು ಆಶ್ರಯ ಕಾಲೊನಿಯ 2, ಆಜಾದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬೇತೂರ್ ರಸ್ತೆ ಅಣ್ಣಿಗೇರಿ ವೀರಭದ್ರಪ್ಪ ನಗರ ಹಾಗೂ ಅಕ್ತರ್ ರಾಜಾ ಸರ್ಕಲ್ ನಲ್ಲಿ 2, ಬಸವಾಪಟ್ಟಣ ಗ್ರಾಮದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಎಲ್ಲಾ ಪ್ರಕರಣಗಳಲ್ಲಿ ಹರಿಹರ ನಗರದಲ್ಲಿನ ಲಲಿತಾ ಪ್ಯಾಲೆಸ್ ನಲ್ಲಿನ ಇಸ್ಪೀಟ್ ಜೂಜಾಟ ಪ್ರಕರಣದಲ್ಲಿ ₹ 11.70 ಲಕ್ಷ ನಗದು, ನಾಲ್ಕು ಕಾರು ಮತ್ತು ಬೈಕ್ ಬೃಹತ್ ಮೊತ್ತ ಕಲೆಹಾಕಲಾಗಿದೆ.
ಜಿಲ್ಲೆಯಲ್ಲಿ ಎಗ್ಗಿಲ್ಲದೇ ನಡೆಯುತ್ತಿದ್ದ ಇಸ್ಪೀಟ್, ಮಟ್ಕಾ ಜೂಜಾಟಕ್ಕೆ ಎಸ್ಪಿ ರಿಷ್ಯಂತ್ ಸೂಚನೆಯ ಮೇರೆಗೆ ದಾಳಿ ನಡೆದಿದ್ದು, ಇನ್ನಷ್ಟು ದಿನಗಳಲ್ಲಿ ಜೂಜಾಟಕ್ಕೆ ಕಡಿವಾಣ ಬೀಳುವ ಎಲ್ಲಾ ಸಾಧ್ಯತೆಗಳಿವೆ.
ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.