ರಾಜ್ಯದ ಅತಿಥಿಗಳ ಸ್ವಾಗತಕ್ಕೆ ಶಿಷ್ಟಾಚಾರದ ಪ್ರಕಾರ ಅಧಿಕಾರಿಗಳ ನಿಯೋಜನೆ : ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಬೆಂಗಳೂರಿಗೆ ಆಗಮಿಸಿದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರದ ಮಾಜಿ ಸಚಿವರುಗಳನ್ನು ರಾಜ್ಯ ಅತಿಥಿಗಳೆಂದು ಪರಿಗಣಿಸಲಾಗಿದ್ದರಿಂದ ಶಿಷ್ಟಾಚಾರದ ಪ್ರಕಾರ ಆ ಎಲ್ಲ ಅತಿಥಿ ಗಣ್ಯರ ಸ್ವಾಗತಕ್ಕೆ ಮಾತ್ರ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ರಾಜಕೀಯ ಕಾರ್ಯಕ್ರಮಕ್ಕೆ ಐಎಎಸ್ ಅಧಿಕಾರಿಗಳನ್ನು ಬಳಸಿಕೊಂಡಿದ್ದಾರೆ ಎನ್ನುವ ವಿರೋಧ ಪಕ್ಷಗಳ ಟೀಕೆಗೆ ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿದ್ದಾರೆ.
ರಾಜ್ಯಕ್ಕೆ ಆಗಮಿಸಿದ ನಾನಾ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರದ ಮಾಜಿ ಸಚಿವರುಗಳು ರಾಜ್ಯದ ಅತಿಥಿಗಳಾಗಿದ್ದರು. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಂತೆಯೇ ನಡೆದಿದೆ. ಇಲ್ಲಿ ಯಾವುದೇ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ. ಬದಲಿಗೆ ಶಿಷ್ಟಾಚಾರದ ಪ್ರಕಾರವೇ ಗಣ್ಯರ ಸ್ವಾಗತಕ್ಕಷ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತೇ ಹೊರತು ರಾಜಕೀಯ ಕಾರ್ಯಕ್ರಮಕ್ಕೆ ಅಧಿಕಾರಿಗಳನ್ನು ಬಳಸಿಕೊಂಡಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.