Dhuda :ದೂಡಾ ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ಭಾರಿ ಭ್ರಷ್ಟಾಚಾರ : ದೇವರಮನೆ ಶಿವಕುಮಾರ್ ವಿರುದ್ದ ಗಂಭೀರ ಆರೋಪ ಮಾಡಿದ ಪ್ರಮೋದ್ ಮುತಾಲಿಕ್
ದಾವಣಗೆರೆ: 2017 ರಲ್ಲಿ ದೂಡಾದಿಂದ ತಮ್ಮ ಕುಟುಂಬದ ಮೂವರ ಹೆಸರಿಗೆ ಅಕ್ರಮವಾಗಿ ನಿವೇಶನ ಪಡೆದಿರುವ ದೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್ ಅವರು ಹತ್ತು ದಿನಗಳೊಳಗೆ ರಾಜೀನಾಮೆ ಸಲ್ಲಿಸದಿದ್ದರೆ ದೂಡಾ ಕಚೇರಿ ಮುಂಭಾಗ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವರಮನಿ ಒಂಭತ್ತು ಮನೆಗಳನ್ನು ಹೊಂದಿದ್ದರೂ ಸಹ ತಮ್ಮ ಹಾಗೂ ತಮ್ಮಿಬ್ಬರು ಸಹೋದರರಾದ ದೇವರಮನೆ ಶಿವರಾಜ್, ದೇವರಮನೆ ಮುರುಗೇಶ್ ಹೆಸರಿನಲ್ಲಿ ನಿವೇಶನ ಪಡೆದಿದ್ದಾರೆ. ಕೂಡಲೇ ಆ ಮೂರು ನಿವೇಶನ ಹಿಂದಿರುಗಿಸಬೇಕು ಎಂದು ಅವರು ಹೇಳಿದರು. ದೂಡಾ ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು, ಇದರಲ್ಲಿ ಎಲ್ಲ ಪಕ್ಷದವರೂ ಭಾಗಿಯಾಗಿದ್ದಾರೆ. ಅಕ್ರಮವಾಗಿ ಮೂರು ನಿವೇಶನ ಪಡೆದಿರುವ ದೇವರಮನೆ ಶಿವಕುಮಾರ್‌ರನ್ನು ದೂಡಾ ಅಧ್ಯಕ್ಷರನ್ನಾಗಿ ಮಾಡುವ ಮೂಲಕ, ನಾನು ತಿನ್ನುವುದಿಲ್ಲ, ಬೇರೆಯವರಿಗೂ ತಿನ್ನಲು ಬಿಡುವುದಿಲ್ಲ ಎಂಬುದಾಗಿ ಹೇಳುವ ಪ್ರಧಾನಮಂತ್ರಿ ನರೇಂದ್ರ ಮೋದಿ ಹೆಸರಿಗೆ ಬಿಜೆಪಿಯವರು ಕಳಂಕ ಮಾಡದ್ದಾರೆ ಎಂದು ಆರೋಪಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಮಣಿಕಂಠ, ಮುಖಂಡರಾದ ಆಲೂರು ರಾಜಶೇಖರ್,ಸಾಗರ್, ಕರಾಟೆ ರಮೇಶ್, ಶ್ರೀಧರ್, ಸುನೀಲ್ ವಾಲಿ, ವಿನೋದ್ ಮತ್ತಿತರರು ಗೋಷ್ಠಿಯಲ್ಲಿದ್ದರು.