ಚನ್ನಗಿರಿಯ ಮಾವಿನಕಟ್ಟೆ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ
ದಾವಣಗೆರೆ : ಅರಣ್ಯ ಇಲಾಖೆ ಒಡೆತನದ ಜಮೀನುಗಳಲ್ಲಿ ಸಾಗುವಳಿ ಮಾಡಿಕೊಂಡಿರುವ ಯಾವುದೇ ರೈತರು ಸಾಗುವಳಿ ಪತ್ರ ಇಲ್ಲ ಎಂದು ಧೈರ್ಯಗುಂದದಿರಿ, ಈಗಾಗಲೇ ನೀವು ಉಳುಮೆ ಮಾಡಿಕೊಂಡಿರುವ ಜಮೀನಿಗೆ ಹಕ್ಕು ಪತ್ರ ಕೊಡಿಸುತ್ತೇನೆ ಎಂದು ಚನ್ನಗಿರಿ ಶಾಸಕರು ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷರಾದ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.
ಚನ್ನಗಿರಿ ತಾಲ್ಲೂಕು ಮಾವಿನಕಟ್ಟೆ ಗ್ರಾಮದಲ್ಲಿ ಏರ್ಪಡಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಹಿಂದೆ ಕೇಂದ್ರ ಸರ್ಕಾರ ಅರಣ್ಯ ಪ್ರದೇಶಗಳಲ್ಲಿ ಮೂರು ತಲೆಮಾರುಗಳಿಂದ ಉಳುಮೆ ಮಾಡಿಕೊಂಡಿರುವ ಜಮೀನುಗಳ ಹಕ್ಕನ್ನು ಉಳುಮೆ ಮಾಡಿಕೊಂಡಿರುವವರಿಗೆ ನೀಡುತಿತ್ತು, ಈಗ ಆ ಕಾಯ್ದೆಗೆ ತಿದ್ದುಪಡಿ ಮಾಡಿ ಒಂದು ತಲೆಮಾರಿಗೆ ಸೀಮಿತಗೊಳಿಸಿ ಹಕ್ಕುಪತ್ರ ನೀಡುವ ಚಿಂತನೆಯಲ್ಲಿದ್ದು ಕಾಯ್ದೆ ಜಾರಿಯಾದರೆ ಎಲ್ಲರಿಗೂ ಅನುಕೂಲವಾಗಲಿದೆ ಎಂದರು.
ಪಿ.ಎಂ. ಕಿಸಾನ್ ಯೋಜನೆಯಲ್ಲಿ ದಾವಣಗೆರೆ ಜಿಲ್ಲೆಗೆ 397 ಕೋಟಿ ಹಣ ಬಂದಿದ್ದು, ಚನ್ನಗಿರಿ ತಾಲ್ಲೂಕಿನ 39 ಸಾವಿರ ರೈತರಿಗೆ 101 ಕೋಟಿ 67 ಲಕ್ಷ ರೈತರ ಖಾತೆಗೆ ಜಮೆಯಾಗುವುದರೊಂದಿಗೆ ಚನ್ನಗಿರಿ ತಾಲ್ಲೂಕಿಗೆ ಅಗ್ರಪಾಲು ದೊರೆತಿದೆ. ಅದರೊಂದಿಗೆ ಮಾವಿನಕಟ್ಟೆ ಗ್ರಾಮ ಪಂಚಾಯಿತಿಗೆ 8.87 ಕೋಟಿ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಾಗಿವೆ. ಮನೆ ಮನೆಗೆ ಗಂಗೆ ಯೋಜನೆಯಡಿ ಪ್ರತಿ ಮನೆಗೂ ನಲ್ಲಿ ಸಂಪರ್ಕ ಒದಗಿಸಿದ್ದು ಕುಡಿಯುವ ನೀರಿನ ಬವಣೆ ತಪ್ಪಿದೆ, ಹಿಂದಿನ ವರ್ಷಗಳಲ್ಲಿ ತಾಲ್ಲೂಕಿನಾದ್ಯಂತ ನೂರಾರು ಕೊಳವೆ ಬಾವಿಗಳನ್ನು ತೋಡಿಸಲಾಗುತಿತ್ತು, ಈ ಬಾರಿ ಹತ್ತರಿಂದ ಹದಿನೈದು ಬೋರ್ ಗಳಷ್ಟನ್ನೇ ಕೊರೆಯಿಸಲಾಗಿದೆ ಎಂದರು.
ಮಹಿಳೆಯರು ಸಬಲರಾಗಬೇಕೆಂಬ ಉದ್ದೇಶದಿಂದ ಸರ್ಕಾರ ಸ್ತ್ರೀ ಶಕ್ತಿ ಸಂಘಗಳಿಗೆ ಅನುದಾನ ನೀಡುತಿದ್ದು, ತಾಲೂಕಿನ 40 ಸ್ತ್ರೀ ಶಕ್ತಿ ಸಂಘಗಳಿಗೆ ತಲಾ1.25 ಲಕ್ಷಗಳ ಆರ್ಥಿಕ ನೆರವು ನೀಡಿದೆ. ಕುಟುಂಬದಲ್ಲಿ ಒಂದು ಹೆಣ್ಣು ಮಗಳು ಮನಸು ಮಾಡಿದರೆ ಏನೆಲ್ಲಾ ಸಾಧಿಸಬಹುದೆಂಬ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಜೀವನೋಪಾಯಕ್ಕಾಗಿ ರೊಟ್ಟಿ ಮಾಡುತಿದ್ದ ಹೆಣ್ಣು ಮಗಳೊಬ್ಬಳು ಇಂದು ವಿದೇಶಗಳಿಗೆ ರೊಟ್ಟಿ ರಪ್ತು ಮಾಡುತ್ತಿರುವಂತಹ ಉದಾಹರಣೆಗಳಿವೆ. ಸರ್ಕಾರ ಇಂತಹ ನೂರಾರು ಯೋಜನೆಗಳನ್ನು ನೀಡಿದ್ದು, ಸರ್ಕಾರ ನೀಡುವ ಹಣಕಾಸಿನ ನೆರವಿನಿಂದ ಮಹಿಳೆಯರು ಸಬಲರಾಗಲು ಸಾಧ್ಯ ಎಂದರು.
ಆಶ್ರಯ ಯೋಜನೆಯಡಿ ಈಗಾಗಲೇ ಮನೆ ಮಂಜೂರಾಗಿರುವ ಮನೆಗಳನ್ನು ಕಟ್ಟಿಸಿಕೊಳ್ಳಿ, ಹೆಚ್ಚಿನ ಅನುದಾನದ ಮನೆ ಬೇಕೆಂದು ಕಾಯ್ದು ಕುಳಿತರೆ ಮಂಜೂರಾಗಿರುವ ಮನೆಯು ಕೈತಪ್ಪುತ್ತದೆ ಹಾಗೂ ತಾಲ್ಲೂಕಿನಲ್ಲಿ ಸಾಕಷ್ಟು ಯೋಜನೆಗಳಿಂದ ಹಲವರು ಫಲಾನುಭವಿಗಳಾಗಿದ್ದೀರಿ, ತಾಲ್ಲೂಕಿನಲ್ಲಿ 912 ಮಹಿಳೆಯರಿಗೆ ವಿಧವಾ ವೇತನ ಮಂಜೂರು ಮಾಡಲಾಗಿದೆ. ಒಟ್ಟಾರೆಯಾಗಿ ಮಾವಿನಕಟ್ಟೆ ವ್ಯಾಪ್ತಿಯಲ್ಲಿ 4.50 ಕೋಟಿ ವೆಚ್ಚದಲ್ಲಿ ಚತುಷ್ಪತ ರಸ್ತೆ ನಿರ್ಮಿಸುವ ಮೂಲಕ ಈ ಗ್ರಾಮವನ್ನು ಒಂದು ಸುಂದರ ಗ್ರಾಮವನ್ನಾಗಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಸರ್ಕಾರವನ್ನೇ ನಿಮ್ಮ ಮನೆ ಬಾಗಿಲಿಗೆ ತಂದು ನಿಲ್ಲಿಸುವಂತಹ ಕಾರ್ಯಕ್ರಮ ಇದಾಗಿದ್ದು ಎಲ್ಲಾ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ನಿಮ್ಮ ಗ್ರಾಮದಲ್ಲಿದ್ದು ನಿಮ್ಮ ಯಾವುದೇ ಕುಂದು ಕೊರತೆ, ಇದುವರೆಗೂ ಆಗದೇ ಇರುವ ಕೆಲಸವನ್ನು ಮಾಡಿಸಿಕೊಳ್ಳಬಹುದಾಗಿದೆ. ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಿಗೆ ಹೋಗದೆ ನಿಮ್ಮೂರಿನಲ್ಲಿಯೇ ಇರುವ ಗ್ರಾಮ ಒನ್ ಕೇಂದ್ರದಲ್ಲಿ ಯಾವುದೇ ಖರ್ಚು ಇಲ್ಲದೆ ಕೆಲಸ ಮಾಡಿಕೊಳ್ಳಬಹುದಾಗಿದೆ. ಅತಿ ಹೆಚ್ಚು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನರಿರುವ ಈ ಭಾಗದ ಜನರ ಬಳಿಗೆ ಶಾಸಕರು ಜಿಲ್ಲಾಧಿಕಾರಿಗಳು ತಲುಪಬೇಕೆಂಬ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಮಾವಿನಕಟ್ಟೆಯಲ್ಲಿ ಆಯೋಜಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಚನ್ನಗಿರಿ ತಾಲ್ಲೂಕಿನಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು ಇತರೆ ತಾಲ್ಲೂಕುಗಳಿಗೆ ಮಾದರಿಯಾಗಿ, ಸುಮಾರು 999 ಎಕರೆ ಬಗರ್ ಹುಕುಂ ಜಮೀನನ್ನು 485 ಫಲಾನುಭವಿಗಳು ಪಡೆದುಕೊಂಡಿದ್ದಾರೆ. ಗ್ರಾಮ ಒನ್ ಕೇಂದ್ರಗಳಲ್ಲಿ ಆಯುಷ್ಮಾನ್ ಆರೋಗ್ಯ ಕಾರ್ಡ್ ಕೇವಲ 30 ರೂ.ಗಳಲ್ಲಿ ಮಾಡಿಕೊಳ್ಳಲಾಗುತ್ತದೆ ಇದರ ಸದುಪಯೋಗ ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಎ. ಚನ್ನಪ್ಪ ಮಾತನಾಡಿ, ಜನರು ಜಾಗೃತಿ ಹೊಂದಿ ಸರ್ಕಾರ ರೂಪಿಸಿರುವ ಎಲ್ಲಾ ಯೋಜನೆಗಳನ್ನು ಪಡೆದುಕೊಳ್ಳಬೇಕು, ಹಾಗೆಯೇ ಈ ಹಿಂದೆ ಜಾತಿ ಪ್ರಮಾಣ ಪತ್ರ ಪಡೆಯಲು ತಾಲ್ಲೂಕು ಕಚೇರಿಗಳಿಗೆ ತಿಂಗಳುಗಟ್ಟಲೆ ಅಲೆಯುವಂತಹ ಪರಿಸ್ಥಿತಿ ಇತ್ತು. ಈಗ ಗ್ರಾಮ ಒನ್ ಕೇಂದ್ರದ ಮೂಲಕ ಗ್ರಾಮದಲ್ಲಿಯೇ ಪಡೆದುಕೊಳ್ಳಬಹುದಾಗಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೃಷಿ, ತೋಟಗಾರಿಕೆಗಳಲ್ಲಿ ಕೆಲಸ ಮಾಡಿ ಪ್ರತಿದಿನ 310 ರೂ. ಗಳನ್ನು ಪಡೆಯಬಹುದು ಎಂದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ನಾಗರಾಜ್ ಮಾತನಾಡಿ, ಗ್ರಾಮಪಂಚಾಯಿತಿ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ಆಯುಷ್ಮಾನ ಭಾರತ್ ಕರ್ನಾಟಕ ಆರೋಗ್ಯ ಕಾರ್ಡ್ ಪಡೆದು ಬಿ.ಪಿ.ಎಲ್ ಕುಟುಂಬದವರಿಗೆ 5 ಲಕ್ಷದವರೆಗೆ ಉಚಿತ ಆರೋಗ್ಯ ತಪಾಸಣೆ ಇರುತ್ತದೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಉಚಿತವಾಗಿ ಡಯಾಲಿಸಿಸ್ ಮಾಡಲಾಗುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಮಾಹಿತಿ ನೀಡಿದರು. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಮೇಶ್ ಮಾತನಾಡಿ, ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಒಂದುವರೆ ಎಕರೆಯಿಂದ ಐದು ಎಕರೆ ಜಮೀನು ಹೊಂದಿದವರಿಗೆ ಕೊಳವೆಬಾವಿ ಕೊರೆದು ವಿದ್ಯುದೀಕರಣ ಮಾಡಿಕೊಡಲಾಗುತ್ತದೆ. ಭೂ ಒಡೆತನ ಯೋಜನೆಯು ಸರ್ಕಾರದ ನೂತನ ಯೋಜನೆಯಾಗಿದ್ದು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ 2 ಎಕರೆ ಜಮೀನನ್ನು ಕೊಡಿಸುವಂತಹ ಯೋಜನೆಯಾಗಿದೆ ಎಂದರು.
ತಹಶೀಲ್ದಾರ್ ಪಟ್ಟರಾಜು ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ಜಿಲ್ಲಾಧಿಕಾರಿಗಳು ಮಾವಿನಕಟ್ಟೆ ಗ್ರಾಮದಲ್ಲಿನ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ ಸರ್ಕಾರದ ಯೋಜನೆಗಳು ಜನರಿಗೆ ತಲುಪುವಂತೆ ಕೆಲಸ ನಿರ್ವಹಿಸಿ ಹಾಗೂ ಆಯುಷ್ಮಾನ್ ಆರೋಗ್ಯ ಕಾರ್ಡ್ ಮಾಡಿಕೊಡಿ ಎಂದು ಆಪರೇಟರ್ ಸಂಜೀವನಾಗ್ ಅವರಿಗೆ ಸೂಚಿಸಿದರು. ವೇದಿಕೆಯಲ್ಲಿ ಸಮಾಜ ಕಲ್ಯಾಣಾಧಿಕಾರಿ ರೇಷ್ಮಾ ಕೌಸರ್, ಭೂಸ್ವಾಧಿನಾಧಿಕಾರಿ ರೇಷ್ಮ ಹಾನಗಲ್, ತಾ.ಪಂ. ಇಓ ಪ್ರಕಾಶ್, ಡಿವೈಎಸ್ಪಿ ಸಂತೋಷ್, ನಿರ್ಮಿತಿ ಕೇಂದ್ರದ ರವಿಕುಮಾರ್ ಹಾಗೂ ಗ್ರಾ.ಪಂ ಅಧ್ಯಕ್ಷರು, ಸದಸ್ಯರು ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮದ ಜನರು ಭಾಗವಹಿಸಿದ್ದರು.
garudavoice21@gmail.com 9740365719