ಮಾರ್ಚ್ ತಿಂಗಳಲ್ಲಿ ಜಿಲ್ಲಾ ಮಟ್ಟದ ಫಲಾನುಭವಿಗಳ ಸಮ್ಮೇಳನ ಮುಖ್ಯಮಂತ್ರಿ ಭಾಗಿ : ಜಿಲ್ಲಾಧಿಕಾರಿ ಶಿವಾನಂದ ಕಾಪಶಿ
ದಾವಣಗೆರೆ : ಸರ್ಕಾರದ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆದ ಫಲಾನುಭವಿಗಳ ಜಿಲ್ಲಾ ಮಟ್ಟದ ಸಮಾವೇಶವನ್ನು ಇದೇ ಮಾರ್ಚ್ ಮೊದಲ ವಾರದಲ್ಲಿ ಜಿಲ್ಲೆಯಲ್ಲಿ ಆಯೋಜಿಸಲಾಗುವುದು. ವಿವಿಧ ಇಲಾಖಾ ಅಧಿಕಾರಿಗಳು ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ಸರ್ಕಾರದ ಸೌಲಭ್ಯ ಪಡೆದ ಫಲಾನುಭವಿಗಳ ಮಾಹಿತಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ಮಟ್ಟದ ಫಲಾನುಭವಿಗಳ ಸಮ್ಮೇಳನದ ಪೂರ್ವ ಸಿದ್ಧತೆ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಆಂದೋಲನದ ರೀತಿಯಲ್ಲಿ ಫಲಾನುಭವಿಗಳ ಸಮ್ಮೇಳನವನ್ನು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗುವುದು. ಈ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಸಮಾವೇಶ ಆಯೋಜಿಸಲಾಗುವುದು.ಸರ್ಕಾರದಿಂದ ಶೀಘ್ರವೇ ದಿನಾಂಕ ನಿಗದಿಯಾಗಲಿದೆ. ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಕಾರ್ಮಿಕ ಇಲಾಖೆ, ವಿವಿಧ ನಿಗಮಗಳು, ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳು ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಫಲಾನುಭವಿ ಆಧಾರಿತ ಯೋಜನೆಗಳಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಹಾಗೂ ವಿವಿಧ ಇಲಾಖೆಯ ಯೋಜನೆಗಳ ಕುರಿತಂತೆ ವಸ್ತು ಪ್ರದರ್ಶನ ಮಳಿಗೆಗಳನ್ನು ತೆರೆದು ಜಾಗೃತಿ ಮೂಡಿಸಲು ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿವಿಧ ಇಲಾಖೆ ಹಾಗೂ ನಿಗಮಗಳ ಸಾಲ ಹಾಗೂ ಸಹಾಯಧನ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಬ್ಯಾಂಕ್‍ಗಳಲ್ಲಿ ಮಂಜೂರಾತಿಗೆ ಬಾಕಿ ಉಳಿದಿರುವ ಅರ್ಜಿಗಳನ್ನು ಬ್ಯಾಂಕುವಾರು ಹಾಗೂ ಇಲಾಖಾವಾರು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಬಾಕಿ ಅರ್ಜಿಗಳನ್ನು ಆದ್ಯತೆಯ ಮೇರೆಗೆ ತ್ವರಿತವಾಗಿ ವಿಲೇವಾರಿಗೊಳಿಸಲು ಬ್ಯಾಂಕರ್ಸ್‍ಗಳಿಗೆ ಸೂಚನೆ ನೀಡಿದರು.
ಸಂಪಕ್ ಅಧಿಕಾರಿ ನೇಮಕ: ಬ್ಯಾಂಕ್‍ಗಳಿಗೆ ಆಗಮಿಸುವ ಫಲಾನುಭವಿಗಳಿಗೆ ಅಗತ್ಯ ಮಾಹಿತಿ ಹಾಗೂ ನೆರವು ಒದಗಿಸಲು ಕನ್ನಡ ಭಾಷೆಬಲ್ಲ ಸಾರ್ವಜನಿಕ ಸಂಪರ್ಕ ಅಧಿಕಾರಿ ನೇಮಕಮಾಡಿಕೊಳ್ಳಲು ಬ್ಯಾಂಕರ್ಸ್‍ಗಳಿಗೆ ಸಲಹೆ ನೀಡಿದರು.
ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎ.ಚನ್ನಪ್ಪ ಅವರು ಮಾತನಾಡಿ, ಬ್ಯಾಂಕ್‍ಗಳಲ್ಲಿ ಸಾರ್ವಜನಿಕರಿಗೆ ಸಕಾರಾತ್ಮಕ ಸ್ಪಂದನೆ ಸಿಗುವುದಿಲ್ಲ ಎಂಬ ದೂರುಗಳು ವ್ಯಾಪಕವಾಗಿವೆ. ಬ್ಯಾಂಕ್ ಸಿಬ್ಬಂದಿ ಮತ್ತು ಅಧಿಕಾರಿಗಳು ಗ್ರಾಹಕರೊಂದಿಗೆ ಹಾಗೂ ವಿವಿಧ ಇಲಾಖೆಯ ಫಲಾನುಭವಿಗಳು ಬ್ಯಾಂಕ್‍ಗಳಲ್ಲಿ ಮಾಹಿತಿ ಕೋರಿ ಬಂದಾಗ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ ಸೌಜನ್ಯದಿಂದ ನಡೆದುಕೊಳ್ಳುವಂತೆ ಸಲಹೆ ನೀಡಿದರು.
ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ, ಉಪ ವಿಭಾಗಾಧಿಕಾರಿಗಳಾದ ಶ್ರೀಮತಿ ದುರ್ಗಶ್ರೀ ಹಾಗೂ ಹುಲ್ಮನಿ ತಿಮ್ಮಣ್ಣ, ವಿವಿಧ ಇಲಾಖಾ ಅಧಿಕಾರಗಳು, ವಿವಿಧ ಬ್ಯಾಂಕಗಳ ವ್ಯವಸ್ಥಾಪಕರು ಉಪಸ್ಥಿತರಿದ್ದರು.