ವಿಟಿಯು ಘಟಿಕೋತ್ಸವ-18 ಚಿನ್ನ ಪಡೆದ ಮುರಳಿ

ವಿಟಿಯು ಘಟಿಕೋತ್ಸವ-18 ಚಿನ್ನ ಪಡೆದ ಮುರಳಿ
ಬೆಳಗಾವಿ: ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಎಸ್.ಮುರಳಿ ಅವರು ಇಲ್ಲಿನ ವಿಟಿಯು ಘಟಿಕೋತ್ಸವದಲ್ಲಿ ಶುಕ್ರವಾರ 18 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ.
ಅವರ ತಂದೆ ಬೆಂಗಳೂರಿನ ಎಚ್‌ಕೆಬಿಕೆ ಎಂಜಿನಿಯರಿಂಗ್ ಕಾಲೇಜಿನ ಲ್ಯಾಬ್ ಇನ್‌ಸ್ಟ್ರಕ್ಟರ್ ಆಗಿದ್ದಾರೆ. ತಾಯಿ ಗೃಹಿಣಿ. ಸಾಮಾನ್ಯ ಕುಟುಂಬದಲ್ಲೇ ಹುಟ್ಟಿ ಬೆಳೆದ ಮುರಳಿ ಅವರದು ಐತಿಹಾಸಿಕ ಸಾಧನೆ. ವಿಟಿಯು 25 ವರ್ಷಗಳ ಇತಿಹಾಸದಲ್ಲಿ ಮುರಳಿ ಅತಿ ಹೆಚ್ಚು ಚಿನ್ನ ಬಾಚಿಕೊಂಡ ಕೀರ್ತಿಗೆ ಪಾತ್ರರಾಗಿದ್ದಾರೆ.
ಆಟೊ ಚಾಲಕನ ಪುತ್ರಿಗೆ 8 ಚಿನ್ನ:
ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ಕುರುಂಜಿ ವೆಂಕಟರಮನಗೌಡ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಎಸ್.ಕೃತಿ ಅವರು 8 ಚಿನ್ನದ ಪದಕಗಳ ಮೂಲಕ ವಿಶ್ವವಿದ್ಯಾಲಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ..
ಅವರ ತಂದೆ ಜನಾರ್ದನ್ ಸುಳ್ಯದಲ್ಲಿ ಆಟೊ ಓಡಿಸುತ್ತಾರೆ. ತಾಯಿ ಆಹಾರ ಪದಾರ್ಥಗಳ ಸಂಸ್ಕರಣೆ ಕೆಲಸ ಮಾಡುತ್ತಾರೆ. ಬೆಂಗಳೂರಿನ ಕಂಪನಿಯೊಂದರಲ್ಲಿ ಅಪ್ಲಿಕೇಷನ್ ಎಂಜಿನಿಯರ್ ಆಗಿರುವ ಕೃತಿ, ಕೆಲಸ ಮಾಡುತ್ತಲೇ ಓದು ಕೂಡ ಮುಂದುವರಿಸಿದ್ದು ವಿಶೇಷ.
ರಾಜ್ಯಪಾಲ ಥಾವರಚಂದ್ ಗೆಹಲೋತ್ ಪದಕಗಳನ್ನು ಪ್ರದಾನ ಮಾಡಿದರು. ಎಐಸಿಟಿಇ ಅಧ್ಯಕ್ಷ ಪ್ರೊ.ಟಿ.ಜಿ. ಸೀತಾರಾಮ್, ಕುಲಪತಿ ಪ್ರೊ.ಎಸ್.ವಿದ್ಯಾಶಂಕರ ಇದ್ದರು.