ಎನ್.ಡಿ.ಎ ಅಭ್ಯರ್ಥಿ ಯಾಗಿ ಡಾ|| ಸಿ.ಎನ್.ಮಂಜುನಾಥ್ ಒಳ್ಳೇ ಡಾಕ್ಟರ್, ಅವರನ್ನು ಬಲಿಪಶು ಮಾಡಲು ಹೊರಟ್ಟಿದ್ದಾರೆ : ಇಕ್ಬಾಲ್ ಹುಸೇನ್
ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಎನ್.ಡಿ.ಎ ಮೈತ್ರಿ ಅಭ್ಯರ್ಥಿಯಾಗಿ ಡಾ.ಮಂಜುನಾಥ್ ಕಣಕ್ಕಿಳಿಸುವ ಮೂಲಕ ಅವರನ್ನು ಬಲಿಪಶು ಮಾಡಲು ಹೊರಟಿದ್ದಾರೆ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ವ್ಯಂಗ್ಯವಾಡಿದರು.
ರಾಮನಗರ ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ ಅವರು ಡಾ.ಮಂಜುನಾಥ್ ಒಳ್ಳೇ ಡಾಕ್ಟರ್, ಅವರ ಕ್ಷೇತ್ರವೇ ಬೇರೆಯಾಗಿದೆ ಅಂತವರನ್ನು ರಾಜಕೀಯಕ್ಕೆ ತಂದು ಅಮಾಯಕರನ್ನಾಗಿ ಮಾಡಲು ಹೊರಟಿದ್ದಾರೆ. ಪ್ರತಿನಿತ್ಯ ಕ್ಷೇತ್ರದ ಜನತೆಯ ಜೊತೆಯಿದ್ದು ಅಭಿವೃದ್ದಿ ಹರಿಕಾರರಾಗಿರುವ ಡಿ.ಕೆ.ಸುರೇಶ್ ವಿರುದ್ದ ಯಾಕೆ ಕುಮಾರಸ್ವಾಮಿ, ಸಿ.ಪಿ.ಯೋಗೇಶ್ವರ್, ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರು ಸ್ಪರ್ಧಿಸಲಿಕ್ಕೆ ತಾಕತಿಲ್ವಾ ಎಂದು ಪ್ರಶ್ನಿಸಿದ ಅವರು ಡಿ.ಕೆ.ಸುರೇಶ್ ವಿರುದ್ಧ ನಿಮಗೆ ಅಭ್ಯರ್ಥಿ ಇಲ್ಲ ಅನ್ನೋದು ಇದರಿಂದ ಗೊತ್ತಾಗ್ತಿದೆ. ಪಾಪ ಮಂಜುನಾಥ್ ರನ್ನು ಹರಕೆ ಕುರಿ ಮಾಡಲು ಹೊರಟಿದ್ದಾರೆ ಎಂದರು.
ಡಿ.ಕೆ.ಬ್ರದರ್ಸ್ ವಿಷಯವಾಗಿ ಕಿರಾತಕರನ್ನ ಸೋಲಿಸಬೇಕು ಎಂದು ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿ ನಿಮ್ಮ ಕೈ ಹಿಡಿದು ರಾಜ್ಯದ ಮುಖ್ಯಮಂತ್ರಿ ಮಾಡಿದಾಗ ಅವರು ಕಿರಾತಕರಾಗಿ ರಲಿಲ್ವಾ, ರಾಮನಗರದಲ್ಲಿ ಒಬ್ಬ ಮುಸ್ಲಿಂ ವ್ಯಕ್ತಿಯನ್ನು ಗೆಲ್ಲಿಸಿದಕ್ಕೆ ಅವರು ಕಿರಾತಕರಾದ್ರ, ಕುಮಾರಸ್ವಾಮಿ ಅವರೇ ಆ ಪದ ನಿಮಗೆ ಅನ್ವಯಿಸುತ್ತದೆ, ನೀವು ಕಿರಾತಕರಾಗಿದ್ದೀರಿ, ಅದರಿಂದಲೇ ಜೆಡಿಎಸ್ ಪಕ್ಷ ಅವನತಿಯತ್ತ ಸಾಗುತ್ತಿದ್ದು, ಹತ್ತಕ್ಕೂ ಹೆಚ್ಚು ಶಾಸಕರು ಲೋಕಸಭಾ ಚುನಾವಣೆಗೂ ಮುಂಚೆ ಕಾಂಗ್ರೆಸ್ ಪಕ್ಷಕ್ಕೆ ಬರಲು ಸಿದ್ಧರಾಗಿದ್ದಾರೆ ಎಂದು ಅವರು ತಿರುಗೇಟು ನೀಡಿದರು.