ರಾಮನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಚೇತನ್ ಕುಮಾರ್ ಪದಗ್ರಹಣ

ರಾಮನಗರ: ರಾಮನಗರ ನಗರಾಭಿವೃದ್ದಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಎ.ಬಿ.ಚೇತನ್ ಕುಮಾರ್ ಬುಧವಾರ ಅಧಿಕಾರ ವಹಿಸಿಕೊಂಡರು.

ನಗರದ ಪ್ರಾಧಿಕಾರದ ಕಚೇರಿಯಲ್ಲಿ ಅಭಿನಂದನೆ ಸ್ವೀಕರಿಸಿ ನೂತನ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್ ಮಾತನಾಡಿ ಪ್ರಾಧಿಕಾರದಿಂದ ನಿರ್ಮಿಸಿರುವ ಬಡಾವಣೆಗಳಿಗೆ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಚರಂಡಿ, ರಸ್ತೆ ನಿರ್ಮಾಣಗಳನ್ನು ಮಾಡಿ ನಿವೇಶನ ಖರೀದಿದಾರರಿಗೆ ಅನುಕೂಲ ಮಾಡಿಕೊಡಲು ನಿಯಮಾನುಸಾರ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಮಾತನಾಡಿ, ಹಲವು ವರ್ಷಗಳಿಂದ ರಾಮನಗರ ಪ್ರಾಧಿಕಾರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಅವುಗಳ ಪರಿಹಾರಕ್ಕೆ ಒಳ್ಳೆಯ ಕೆಲಸಗಾರ ಬೇಕಿತ್ತು. ನಮ್ಮ ಪಕ್ಷದ ವರಿಷ್ಠರು ಆ ಜವಾಬ್ದಾರಿಯನ್ನು ಎ.ಬಿ.ಚೇತನ್ ಕುಮಾರ್ ಅವರಿಗೆ ನೀಡಿದ್ದಾರೆ. ಚೇತನ್ ಕುಮಾರ್ ಅವರು ಈ ಹಿಂದೆ ರಾಮನಗರ ನಗರಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಅನುಭವ ಹೊಂದಿದ್ದಾರೆ. ಅವರ ನೇತೃತ್ವದಲ್ಲಿ ಸದಸ್ಯರುಗಳು ಸೇರಿ ಪ್ರಾಧಿಕಾರದ ಸಮಸ್ಯೆಗಳಿಗೆ ಮುಕ್ತಿ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಗರಾಭಿವೃದ್ದಿ ಪ್ರಾಧಿಕಾರದಲ್ಲಿ 1837 ಜನರು ನಿವೇಶನಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಸಮಸ್ಯೆ ಬಗೆಹರಿಸುವ ಸಂಬಂಧ ಈಗಾಗಲೇ ಸಾಕಷ್ಟು ಸಭೆಗಳನ್ನು ನಡೆಸಿ ಚರ್ಚೆಗಳನ್ನು ನಡೆಸಿದ್ದು, ಎಲ್ಲಾ 1837 ಮಂದಿಗೂ ದಲ್ಲಾಳಿಗಳ ಮಧ್ಯಸ್ಥಿತೆ ಇಲ್ಲದೆ ನೇರವಾಗಿಯೇ ಪ್ರಾಧಿಕಾರದ ಮೂಲಕ ಹಕ್ಕುಪತ್ರ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದರು.

ಈ ವೇಳೆ ಪ್ರಾಧಿಕಾರದ ಸದಸ್ಯರಾದ ಪರ್ವೇಜ್ ಪಾಷಾ, ಶ್ರೀನಿವಾಸ್, ಶ್ರೀದೇವಿ, ಪ್ರವೀಣ್ ಆಯುಕ್ತ ಶಿವನಂಕರೀಗೌಡ, ಮಾಜಿ ಶಾಸಕ ಕೆ.ರಾಜು, ಮಾಜಿ ಎಂಎಲ್ಸಿ ಸಿ.ಎಂ.ಲಿಂಗಪ್ಪ, ನಗರಸಭೆ ಸದಸ್ಯ ಕೆ.ಶೇಷಾದ್ರಿ, ಜಿಪಂ ಮಾಜಿ ಅಧ್ಯಕ್ಷ ಕೆ.ರಮೇಶ್, ನಗರಸಭೆ ಅಧ್ಯಕ್ಷೆ ವಿಜಯಕುಮಾರಿ, ಚನ್ನಪಟ್ಟಣ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗುರುಪ್ರಸಾದ್, ಕನಕಪುರದ ಅನಿಲ್, ಬ್ಲಾಕ್ ಅಧ್ಯಕ್ಷರುಗಳಾದ ವಿ.ಎಚ್.ರಾಜು, ಅಶೋಕ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಿ.ಲೋಕೇಶ್, ಎಂ.ಹೆಚ್.ರಂಜಿತ್ ಸೇರಿದಂತೆ ನೂರಾರು ಮುಖಂಡರು ಹಾಜರಿದ್ದು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!