ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಮಕ್ಕಳಿಗೆ ಕರೆ ನೀಡಿದ ಡಾ.ಸ್ಮಿತಾ
ದಾವಣಗೆರೆ: ಮಕ್ಕಳು ಪಠ್ಯದ ಜೊತೆಗೆ ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಕ್ರೀಡೆಯಂತಹ ಪಠ್ಯೇತರ ಚಟುವಟಿಕೆಗಳಲ್ಲಿಯೂ ಕೂಡಾ ಆಸಕ್ತಿವಹಿಸಬೇಕು ಎಂದು ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ ಡಾ.ಸ್ಮಿತಾ ಹೇಳಿದರು. ನಗರದ ಪಿ.ಜೆ.ಬಡಾವಣೆಯಲ್ಲಿರುವ ಸೇಂಟ್ ಪಾಲ್ಸ್ ಶಾಲೆಯಲ್ಲಿ ಸಂತ ಪೌಲರ ವಿದ್ಯಾಸಂಸ್ಥೆಯ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿದ ಅಂತರ ಶಾಲಾ ಮಕ್ಕಳ ನೃತ್ಯ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ನಿಮ್ಮ ಬುದ್ಧಿ ಶಕ್ತಿ ಬೆಳೆಯಲು ಸಹಕಾರಿಯಾಗಲಿದೆ ಎಂದರು.
ಶಾಲೆಯ ವ್ಯವಸ್ಥಾಪಕರಾದ ಸಿಸ್ಟರ್ ಮಾರ್ಜರಿ ಮಾತನಾಡಿ, ನಿಮ್ಮಡಗಿರುವ ಸುಪ್ತ ಪ್ರತಿಭೆಯನ್ನು ಹೊರಹಾಕಲು ಇದು ಸೂಕ್ತ ವೇದಿಕೆಯಾಗಿದೆ. ಅಲ್ಲದೇ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ನಿಮ್ಮಲ್ಲಿ ಇತರೆ ಶಾಲಾ ಮಕ್ಕಳೊಂದಿಗೆ ಸ್ನೇಹ ಬಾಂಧವ್ಯ ಬೆಳೆಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ನೂಪುರ ಕಲಾ ಸಂಸ್ಥೆಯ ಭರತನಾಟ್ಯ ಕಲಾವಿದೆ ಬೃಂದಾ ಶ್ರೀನಿವಾಸ, ನಿವೃತ್ತ ಶಿಕ್ಷಕಿ ನ್ಯಾನ್ಸಿ ಫರ್ನಾಂಡಿಸ್, ಜೋಯಲುಕಾಸ್‌ನ ಪ್ರಮೋದ, ಶಾಲಾ ಆಡಳಿತ ಮಂಡಳಿಯ ಸಿಸ್ಟರ್ ಸಮಂತ, ಸಿಸ್ಟರ್ ಆಲ್ಬಿನ, ಸಿಸ್ಟರ್ ವಿಜೇತ, ಸಿಸ್ಟರ್ ಆನೀಸ್, ಸಿಸ್ಟರ್ ಫ್ರಾನ್ಸಲೀನ್, ಹಾಗೂ ವಿವಿಧ ವಿಭಾಗಗಳ ಶಿಕ್ಷಕರುಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನಗರದ ವಿವಿಧ ಶಾಲೆಗಳಿಂದ ಮಕ್ಕಳು ಈ ಅಂತರ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
garudavoice21@gmail.com 9740365719