ಸಣ್ಣ ಕೈಗಾರಿಕೆ ಸ್ಥಾಪಿಸಲು ಉದ್ಯಮದಾರರಿಗೆ ಪ್ರೋತ್ಸಾಹ ನೀಡಿ : ಮಹಾಂತೇಶ ಬೀಳಗಿ

ದಾವಣಗೆರೆ : ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ನಿರ್ಮಿಸಲಾದ ವಿಶ್ವ ಮಳಿಗೆಗಳನ್ನು ಸಣ್ಣ ಕೈಗಾರಿಕೆ ಸ್ಥಾಪಿಸಲು ಈಗಾಗಲೇ ಅರ್ಜಿ ಸಲ್ಲಿಸಿರುವ ಅರ್ಜಿದಾರರಿಗೆ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದಾಗುವ ಉದ್ಯಮದಾರರಿಗೆ ಯಾವುದೇ ತೊಂದರೆ ಉಂಟು ಮಾಡದೇ ಸಂಬಂಧಪಟ್ಟ ಪ್ರಾಧಿಕಾರಗಳು ಅಗತ್ಯ ಸೌಲಭ್ಯ ಒದಗಿಸಬೇಕು. ಸ್ಥಳೀಯವಾಗಿ ಉದ್ಯಮ ಪ್ರೋತ್ಸಾಹಿಸಲು ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ನಿರ್ಮಿಸಲಾದ ವಿಶ್ವ ಮಳಿಗೆಗಳನ್ನು ಅರ್ಹ ಫಲಾನುಭವಿಗಳಿಗೆ ಮಂಜೂರು ಮಾಡಿ, ಕೈಗಾರಿಕೆ ಸ್ಥಾಪನೆಗೆ ಅನುಮೋದನೆ ನೀಡಿ ಎಂದು ಹೇಳಿದರು.

ಜಿ.ಪಂ ಉಪಕಾರ್ಯದರ್ಶಿ ಆನಂದ್ ಮಾಹಿತಿ ನೀಡಿ, ಉದ್ಯಮಿಯಾಗು ಉದ್ಯೋಗ ನೀಡು ಮತ್ತು ಕೈಗಾರಿಕಾ ಅದಾಲತ್ ಕುರಿತಂತೆ ಒಂದು ದಿನದ ಕಾರ್ಯಕ್ರಮವು ತುಮಕೂರಿನ ಹೆಚ್.ಎಂ ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮವನ್ನು ದಾವಣಗೆರೆಯಲ್ಲಿ ವಚ್ರ್ಯುಯಲ್ ಕಾನ್ಫರೆನ್ಸ್ ಮೂಲಕ ವೀಕ್ಷಿಸಲು ಜಿಎಂಐಟಿ ಕಾಲೇಜಿನ ಆಡಿಟೋರಿಯಂನಲ್ಲಿ ವಿಕ್ಷೀಸಲು ಎಲ್ಲಾ ಏರ್ಪಾಡುಗಳನ್ನು ಮಾಡಲಾಗಿದೆ. ಕಾರ್ಯಕ್ರಮದಲ್ಲಿ ದಾವಣಗೆರೆಯ ಸುಮಾರು 500 ಇಂಜಿನಿಯರಿಂಗ್/ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಕೈಗಾರಿಕೋದ್ಯಮಿಗಳು ಭಾಗವಹಿಸಲಿದ್ದಾರೆ ಎಂದರು.

ಎನ್.ಸಿ.ಹನುಮಂತರಾವ್ ಮಾಹಿತಿ ನೀಡಿ, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿ,.ವತಿಯಿಂದ ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ಮಿಸಲಾದ ವಿಶ್ವ ಮಳಿಗೆಗಳಿಗೆ ಹಾಗೂ ಹರಿಹರ ತಾಲ್ಲೂಕಿನ ಸಾರಥಿ ಕುರುಬರಳ್ಳಿ ಕೈಗಾರಿಕಾ ವಸಾಹತುವಿನಲ್ಲಿ ಖಾಲಿಇರುವ ಮಳಿಗೆ ಅಥವಾ ನಿವೇಶನಗಳ ಹಂಚಿಕೆಗಾಗಿ ಸ್ವೀಕರಿಸಿರುವ ಅರ್ಜಿಗಳ ಕುರಿತು ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರತಿಕ್ರಿಯಿಸಿ, ಈಗಾಗಲೇ ಪರಿಶೀಲಿಸಿ ಆಯ್ಕೆ ಮಾಡಲಾದ ಅರ್ಜಿದಾರರಿಗೆ ಕೆ.ಎಸ್.ಎಸ್.ಐ.ಡಿ.ಸಿ ವತಿಯಿಂದ ನಿರ್ಮಿಸಲಾದ ಮಳಿಗೆಗಳನ್ನು ಮಂಜೂರು ಮಾಡುವಂತೆ ಸೂಚಿಸಿದರು.

ಜಿಲ್ಲಾ ಸಣ್ಣ ಕೈಗಾರಿಕೋದ್ಯಮಗಳ ಸಂಘದ ಅಧ್ಯಕ್ಷ ಶಂಭುಲಿಂಗಪ್ಪ ಮಾತನಾಡಿ, ಲೋಕಿಕೆರೆ ರಸ್ತೆಯಲ್ಲಿರುವ ಕೆ.ಎಸ್.ಎಸ್.ಐ.ಡಿ.ಸಿ ಕೈಗಾರಿಕಾ ವಸಾಹತುವಿನ ರಸ್ತೆ, ಒಳಚರಂಡಿ, ಬೀದಿಬದಿ ಕಸ ವಿಲೇವಾರಿ ಹಾಗೂ ನೀರಿನ ವ್ಯವಸ್ಥೆಯಂತಹ ಮೂಲಭೂತ ಸೌಕರ್ಯಗಳ ಸಮಸ್ಯೆಯನ್ನು ಬಗೆಹರಿಸಲು ಕೋರಿದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಕೆ.ಎಸ್.ಎಸ್.ಐ.ಡಿ.ಸಿ ಕೈಗಾರಿಕಾ ವಸಾಹತು ಪ್ರದೇಶದ ಸ್ವಚ್ಛತೆ ಹಾಗೂ ನಿರೀನ ಸಮಸ್ಯೆ ಬಗೆಹರಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.

ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ(ಪಿಎಂಇಜಿಪಿ)ಯಡಿಯಲ್ಲಿ 2021-22ನೇ ಸಾಲಿನ ಡಿ.ಐ.ಸಿ, ಕೆ.ವಿ.ಐ.ಬಿ, ಕೆ.ವಿ.ಐ.ಸಿ ಏಜೆನ್ಸಿವಾರು ವಾರ್ಷಿಕ ವರದಿ ಪರಿಶೀಲಿಸಿದರು. ನಂತರ ಪ್ರಸಕ್ತ ಸಾಲಿನಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸುವಂತೆ ಲೀಡ್ ಬ್ಯಾಂಕ್ ಮ್ಯಾನೇಜರ್‍ಗೆ ಜಿಲ್ಲಾಧಿಕಾರಿ ತಿಳಿಸಿದರು. ಸಭೆಯಲ್ಲಿ ಕರ್ನಾಟಕ ಕೈಗಾರಿಕ ಪ್ರದೇಶಾಭಿವೃದ್ಧಿ ಮಂಡಳಿ, ಬೆಸ್ಕಾಂ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾ ಸಣ್ಣ ಕೈಗಾರಿಕೋದ್ಯಮಗಳ ಸಂಘದ ಪದಾಧಿಕಾರಿಗಳು ಹಾಜರಿದ್ದರು.

 

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!