ಟೇಬಲ್ ಟೆನಿಸ್ ತಂಡದ ಆಯ್ಕೆ ಪ್ರಕ್ರಿಯೆಗೆ ಚಾಲನೆ

ದಾವಣಗೆರೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ ಹಾಗೂ ದಾವಣಗೆರೆ ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ನಿರ್ದೇಶಕರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಅಂತರಕಾಲೇಜು ಪುರು?ರ ಮತ್ತು ಮಹಿಳೆಯರ ಟೇಬಲ್ ಟೆನಿಸ್ ಪ್ರಸಕ್ತ ಸಾಲಿನ ಪಂದ್ಯಾವಳಿ ಮತ್ತು ತಂಡದ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.
ಪ್ರಾಂಶುಪಾಲರಾದ ಡಾ. ಸಾಹೀರಾಭಾನು ಫಾರೂಖಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈಗಿನ ಯುವಕರು ಮೊಬೈಲ್ ಸಂಸ್ಕೃತಿಗೆ ಒಳಗಾಗಿ ತಮ್ಮ ಜವಾಬ್ದಾರಿ ಮತ್ತು ಸಮಯವನ್ನು ಮರೆಯುತ್ತಿದ್ದಾರೆ. ಹಾಗಾಗಿ, ಎಲ್ಲರೂ ಒಂದಿಲ್ಲೊಂದು ಕ್ರೀಡೆಯಲ್ಲಿ ನಿಮ್ಮನ್ನು ತೋಡಿಗಿಸಿಕೊಳ್ಳಿ ಆಗ ಆರೋಗ್ಯ ಸುಧಾರಣೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಆರೋಗ್ಯ ಮಾತ್ರವಲ್ಲದೇ ಮಾನಸಿಕ ನೆಮ್ಮದಿ ಸಿಗುವುದರ ಜೊತೆಗೆ ನೀವು ಏನು ಮಾಡಬೇಕೆಂದಿದ್ದಿರೋ ಅದನ್ನು ಸರಳವಾಗಿ ಮಾಡಲು ಈ ಕ್ರೀಡೆಗಳು ಬಹಳ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ. ವೆಂಕಟೇಶ್, ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ಡಾ. ವೀರೇಂದ್ರ, ತಿಪ್ಪೇಸ್ವಾಮಿ, ಐಕ್ಯೂಎಸಿ ಸಂಚಾಲಕ ಡಾ. ನಾರಾಯಣಸ್ವಾಮಿ, ಪ್ರೊ ಭೀಮಣ್ಣ ಸುಣಗಾರ್, ಡಾ. ಎಮ್. ಮಂಜಣ್ಣ, ಡಾ. ದಾದಾಪೀರ್ ನವಿಲೇಹಾಳ, ಡಾ. ಪ್ರವೀಣ್, ಆನಂದಕಂದ, ಪ್ರೊ.ನಟರಾಜ್ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕಿ ಗೀತಾ ದೇವಿ, ಮತ್ತು ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.

 
                         
                       
                       
                       
                       
                       
                       
                      