ಅಂತೂ ಇಂತೂ ಶಿವಮೊಗ್ಗಕ್ಕೆ ಮೊದಲ ವಿಮಾನ ಬಂತು
ಬೆಂಗಳೂರು: ಶಿವಮೊಗ್ಗಕ್ಕೆ ಮಂಗಳವಾರ ಮೊದಲ ವಿಮಾನ ಬಂದಿಳಿದಿದೆ. ಇಲ್ಲಿನ ಸೋಗಾನೆಯ ನೂತನ ವಿಮಾನ ನಿಲ್ದಾಣದ ರನ್‌ವೇಗೆ ಮಂಗಳವಾರ ವಾಯುಸೇನೆಯ ಬೋಯಿಂಗ್ 737 ವಿಮಾನ ಆಗಮಿಸಿತು.
ದೆಹಲಿಯಿಂದ ಬೆಳಿಗ್ಗೆ 11.45ಕ್ಕೆ ಹೊರಟ 180 ಪ್ರಯಾಣಿಕರ ಸಾಮರ್ಥ್ಯದ ಈ ಬೃಹತ್ ಏರ್‌ಬಸ್, ಮಧ್ಯಾಹ್ನ 2.15ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಳಿಯಿತು.
ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ಹುಡ್ಡಾ ಅವರ ನೇತೃತ್ವದಲ್ಲಿ ಬಂದ ಸಿಬ್ಬಂದಿಯನ್ನು ವಿಮಾನ ನಿಲ್ದಾಣದ ಚೀಫ್ ಆಪರೇಟಿಂಗ್ ಆಫೀಸರ್ ಬ್ರಿಗೇಡಿಯರ್ ಡಿ.ಎಂ.ಪೂರ್ವಿಮಠ್ ನೇತೃತ್ವದಲ್ಲಿ ಬರಮಾಡಿಕೊಳ್ಳಲಾಯಿತು.
ಶಿವಮೊಗ್ಗ ಜಿಲ್ಲೆಯ ಜನತೆಯ ಹಲವು ವರ್ಷಗಳ ಕನಸು ನನಸಾಗಿದೆ. ಶಿವಮೊಗ್ಗ ಏರ್‌ಪೋರ್ಟ್‌ಗೆ ವಾಯುಸೇನೆಯ ಮೊದಲ ಪ್ರಾಯೋಗಿಕ ವಿಮಾನ ಬಂದಿಳಿಯಿತು. ಇದು ಡಬಲ್ ಎಂಜಿನ್ ಸರ್ಕಾರದಿಂದ ಸಂಪರ್ಕ ಕ್ರಾಂತಿಯಾಗಿದೆ ಬಿಜೆಪಿ ಸಂತಸ ವ್ಯಕ್ತಪಡಿಸಿದೆ.
ಮೊದಲು ಇಳಿದ ವಿಮಾನಕ್ಕೆ ಸಂಪ್ರದಾಯದಂತೆ ಎರಡು ಅಗ್ನಿಶಾಮಕ ವಾಹನಗಳ ಮೂಲಕ ನೀರು ಎರಚಿ ವಾಟರ್ ಕೆನನ್ ಗೌರವ ಸಲ್ಲಿಸಲಾಯಿತು. ಈ ವೇಳೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಇದ್ದರು.