ಪಿಂಚಣಿಗೆ ಒತ್ತಾಯಿಸಿ ಭಿಕ್ಷಾಟನೆ: ನೌಕರರ ಬಂಧನ-ಬಿಡುಗಡೆ
ಬೆಂಗಳೂರು: ಪಿಂಚಣಿ ಸೌಲಭ್ಯಕ್ಕಾಗಿ ಒತ್ತಾಯಿಸಿ ಭಿಕ್ಷಾಟನೆ ಮೂಲಕ ಪ್ರತಿಭಟಿಸಲು ಮುಂದಾಗಿದ್ದ ಅನುದಾನಿತ ಶಾಲಾ- ಕಾಲೇಜುಗಳ 50 ನೌಕರರನ್ನು ಪೊಲೀಸರು ಮಂಗಳವಾರ ವಶಕ್ಕೆ ಪಡೆದು, ಕೆಲ ಹೊತ್ತಿನ ನಂತರ ಬಿಡುಗಡೆ ಮಾಡಿದ್ದಾರೆ.
ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ನೇತೃತ್ವದಲ್ಲಿ 138 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ನೌಕರರು, ಸೋಮವಾರದಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಮಂಗಳವಾರ ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನೌಕರರು ಭಿಕ್ಷಾಟನೆಗೆ ಮುಂದಾಗಿದ್ದರು.
ಕ್ಷಾಟನೆಗೆ ಅವಕಾಶವಿಲ್ಲ ಎಂದು ಹೇಳಿದ ಪೊಲೀಸರು, ಪ್ರತಿಭಟನಾನಿರತ 50 ನೌಕರರನ್ನು ವಶಕ್ಕೆ ಪಡೆದು ಬಿಎಂಟಿಸಿ ಬಸ್‌ಗಳಲ್ಲಿ ಪೊಲೀಸ್ ಪಡೆ ಮೈದಾನಕ್ಕೆ ಕರೆದೊಯ್ದಿದ್ದರು. ನೌಕರರಿಂದ ಮುಚ್ಚಳಿಕೆ ಬರೆಸಿಕೊಂಡು ರಾತ್ರಿ ಬಿಡುಗಡೆ ಮಾಡಿದರು.
ಪೊಲೀಸರ ಮೂಲಕ ಪ್ರತಿಭಟನೆ ಹತ್ತಿಕ್ಕಲು ಸರ್ಕಾರ ಯತ್ನಿಸುತ್ತಿದೆ. ಇದಕ್ಕೆಲ್ಲ ನಾವು ಹೆದರುವುದಿಲ್ಲ. ಪಿಂಚಣಿ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ’ ಎಂದು ಪ್ರತಿಭಟನಾಕಾರರು ಹೇಳಿದರು.
ಇಬ್ಬರು ಅಸ್ವಸ್ಥ: ಉಪವಾಸ ನಿರತ ಇಬ್ಬರು ನೌಕರರು ಮಂಗಳವಾರ ಅಸ್ವಸ್ಥಗೊಂಡರು. ಅವರಿಗೆ ವೈದ್ಯರು ಚಿಕಿತ್ಸೆ ನೀಡಿದರು.