ಮಾಜಿ ಸಿಎಂ ಬಿಎಸ್‌ವೈ ಪಂಚಮಸಾಲಿ ಸಮಾಜದವರಿಗೆ ಸಿಗಬೇಕಾಗಿದ್ದ ಸ್ಥಾನ ತಪ್ಪಿಸಿದ್ದಾರೆ – ಶ್ರೀ ಜಯಮೃತ್ಯುಂಜಯ ಸ್ವಾಮೀಜಿ
ದಾವಣಗೆರೆ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಸರ್ಕಾರ ತೆಗೆದುಕೊಂಡಿದ್ದ ಸಮಯಾವಕಾಶ ಮುಂದಿನ ತಿಂಗಳು ಮುಗಿಯಲಿದ್ದು, ಅಷ್ಟರೊಳಗೆ ಮೀಸಲಾತಿ ಕೊಡದಿದ್ದರೆ ಅಕ್ಟೋಬರ್ ನಲ್ಲಿ ಮತ್ತೆ ಹೋರಾಟ ಆರಂಭಿಸಬೇಕಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಗುರುಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ರವಾನಿಸಿದ್ದಾರೆ.
ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಒಬಿಸಿ ವಿಧೇಯಕ ಜಾರಿಯನ್ನು ಸ್ವಾಗತಿಸುತ್ತೇವೆ.ಇದರಿಂದ ಪ್ರಾದೇಶಿಕವಾರು ಒಬಿಸಿ ಮೀಸಲಾತಿಗೆ ಮಾನ್ಯತೆ ದೊರೆತಂತಾಗಿದೆ. ನಮ್ಮ 2ಎ ಮೀಸಲಾತಿ ಹೋರಾಟಕ್ಕೆ ಒಂದು ಹಂತದ ಜಯ ದೊರೆತಂತಾಗಿದೆ ಎಂದರು.
ಬಿಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಹೋರಾಟ ನಡೆಸಲಾಗಿತ್ತು. ಆಗ ಅವರು ಆರು ತಿಂಗಳ ಗಡುವು ನೀಡುವಂತೆ ಕೇಳಿದ್ದರು. ಆದರೆ, ಕೊಟ್ಟ ಅವಧಿ ಮುಗಿಯುತ್ತಾ ಬಂದಿದ್ದರೂ ನಮಗೆ ನ್ಯಾಯ ದೊರೆತಿಲ್ಲ ಎಂದು ಅಸಹನೆ ವ್ಯಕ್ತಪಡಿಸಿದರು.
ಸಿಎಂಗೆ ಮೀಸಲಾತಿ ಗಡುವು ನೆನಪಿಸುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಇದೇ 12ರಂದು ಸಮಾಜದಿಂದ ದುಂಡು ಮೇಜಿನ ಪರಿಷತ್ ಹಮ್ಮಿಕೊಂಡಿದ್ದೇವೆ.ಮುಂದಿನ ತಿಂಗಳೊಳಗಾಗಿ ಇಂದಿನ ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಮೀಸಲಾತಿ ಘೋಷಿಸಬೇಕು. ಇಲ್ಲವಾದರೆ ಅಕ್ಟೋಬರ್ ತಿಂಗಳಲ್ಲಿ ಮತ್ತೆ ಹೋರಾಟ ಆರಂಭಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ವಲವಚನಾನಂದ ಸ್ವಾಮೀಜಿ ಮೀಸಲಾತಿ ಹೋರಾಟಕ್ಕೆ ನಮ್ಮೊಂದಿಗೆ ಬಂದಿದ್ದರು. ನಂತರ, ಅವರೇ ಹೊರ ಹೋದರು. ಈಗ ಮತ್ತೆ ಹೋರಾಟಕ್ಕೆ ಕೈಜೋಡಿಸಿದ್ರೆ ಸ್ವಾಗತಿಸುತ್ತೇವೆ.
ಬರುವುದು, ಬಿಡುವುದು ಅವರ ಇಷ್ಟಕ್ಕೆ ಬಿಟ್ಟಿದ್ದು, ನಮ್ಮ ಹೋರಾಟ ಮಾತ್ರ ಮೀಸಲಾತಿ ಸಿಗುವವರೆಗೆ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದರು.
ಪಾದಯಾತ್ರೆ ಆರಂಭಿಸಿದ ಮೇಲೆ ಕೇಂದ್ರಕ್ಕೆ ಸಮಾಜದ ಶಕ್ತಿ ಅರಿವಾಗಿದೆ. ಹಾಗಾಗಿಯೇ ಅದಾದ ನಂತರ, ಸಮಾಜದ ಮೂವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ದೊರೆತಿದೆ ಎಂದರು.
ಮಾಜಿ ಸಿಎಂ ಬಿಎಸ್‌ವೈ ಅವರೇ ಪಂಚಮಸಾಲಿ ಸಮಾಜದವರಿಗೆ ಸಿಗಬೇಕಾಗಿದ್ದ ಸ್ಥಾನ ತಪ್ಪಿಸಿದ್ದಾರೆ ಎಂಬ ಭಾವನೆ ಪಂಚಮಸಾಲಿ ಸಮಾಜದಲ್ಲಿ ಮೂಡಿದೆ. ಬಿಎಸ್‌ವೈ ಅವರು ಉತ್ತರ ಕರ್ನಾಟಕದ ಸಂದರ್ಭದಲ್ಲಿ ಅವರೇ ಉತ್ತರಿಸಲಿ ಎಂದು ಕಾದಿದ್ದೇನೆ ಎಂದು ಹೇಳಿದರು.
ನಾನು ಯಾರನ್ನೂ ಸಿಎಂ ಅಥವಾ ಸಚಿವ ಸ್ಥಾನ ಕೊಡಿಸಲು ಹೋರಾಡುವುದಿಲ್ಲ. ನನ್ನ ಹೋರಾಟವೇನಿದ್ದರೂ ಪಂಚಮಸಾಲಿ ಸಮಾಜದವರಿಗೆ ಮೀಸಲಾತಿಗಾಗಿ ಮಾತ್ರ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಮಾಜಿ ಮೇಯರ್ ಅಜಯಕುಮಾರ್ ಇತರರು ಉಪಸ್ಥಿತರಿದ್ದರು.