ಪುಟ್ಪಾತ್ ಮೇಲೆ ಶೆಡ್ ನಿರ್ಮಾಣ : ಪಾಲಿಕೆ ಆಯುಕ್ತರ ನಡೆಗೆ ಖಂಡನೆ
ದಾವಣಗೆರೆ: ಹೊರ ವಲಯದಲ್ಲಿರುವ ಹೈಟೆಕ್ ಆಸ್ಪತ್ರೆಯಿಂದ ಶ್ರೀರಾಮ ನಗರದ ಎಸ್ಒಜಿ ಕಾಲೋನಿ ಮೂಲಕ ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಸಂಪರ್ಕ ಕಲ್ಪಿಸುವ 60 ಅಡಿ ರಸ್ತೆಯಲ್ಲಿ ಪಾಲಿಕೆ ಆಯುಕ್ತರು ಪುಟ್ ಪಾತ್ ಮಾಡಿ ಮಳಿಗೆ ನಿರ್ಮಾಣ ಮಾಡಲು ಹೊರಟಿರುವುದು ಖಂಡನೀಯ ಎಂದು ಕರ್ನಾಟಕ ಮಾನವ ಹಕ್ಕುಗಳ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಹೆಚ್.ತಿಮ್ಮಣ್ಣ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಆಯುಕ್ತರ ನಡೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ಪುಟ್ಪಾತ್ ಮೇಲೆ ಪಾಲಿಕೆ ಆಯುಕ್ತರು ಶೆಡ್ ನಿರ್ಮಾಣ ಮಾಡಲು ಹೊರಟಿದ್ದು, ಕೂಡಲೇ ಕಾಮಗಾರಿ ಸ್ಥಗಿತಗೊಳಿಸದಿದ್ದರೆ ಪಾಲಿಕೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಎಸ್ಓಜಿ ಕಾಲೋನಿಯ 31 ಹಾಗೂ 41ನೇ ವಾರ್ಡ್ ಹಾಗೂ ರಾಮನಗದಲ್ಲಿ ಪುಟ್ಪಾತ್ ಮೇಲಿನ ಅನಧಿಕೃತ ಷೆಡ್ಗಳನ್ನು ತೆರವುಗೊಳಿಸಿರುವುದು ಸಮಂಜಸವಾಗಿದೆ. ಆದರೆ ಆ ಸ್ಥಳದಲ್ಲಿ ಮತ್ತೆ ಪಾಲಿಕೆಯಿಂದ ಶೆಡ್ ನಿರ್ಮಾಣ ಮಾಡಲು ಹೊರಟಿರುವುದು ಸರಿಯಲ್ಲ. ಸುಗಮ ವಾಹನ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಆ ಜಾಗವನ್ನು ಹಾಗೆಯೇ ಬಿಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಕಲ್ಲೇಶಪ್ಪ, ವೀರೇಶ್, ಮಂಜುನಾಥ್, ರವಿ, ಕೆ.ಪಿ. ಲೋಕೇಶಾಚಾರ್ ಇತರರು ಇದ್ದರು.