ಬಿಜೆಪಿ ಜಾಥಾಕ್ಕೆ ಉಚಿತ ಪೆಟ್ರೋಲ್ : ಚುನಾವಣಾಧಿಕಾರಿಗಳ ದಾಳಿ
ಹೊಸದುರ್ಗ: ತಾಲ್ಲೂಕಿನ ಮಾಡದಕೆರೆಯಲ್ಲಿ ದ್ವಿಚಕ್ರ ವಾಹನಗಳಿಗೆ ಉಚಿತ ಪೆಟ್ರೋಲ್ ಸರಬರಾಜು ಮಾಡುತ್ತಿದ್ದ ಬಂಕ್ ಮೇಲೆ ಶುಕ್ರವಾರ ದಾಳಿ ನಡೆಸಿದ ಚುನಾವಣಾಧಿಕಾರಿ ಮಹೇಂದ್ರಕುಮಾರ್ ನೇತೃತ್ವದ ತಂಡ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸೇರಿ ಮೂವರ ವಿರುದ್ಧ ಹೊಸದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.
ಬಿಜೆಪಿಯ ದ್ವಿಚಕ್ರ ವಾಹನ ಜಾಥಾಗೆ ತೆರಳುವ ಬೈಕ್‌ಗಳಿಗೆ ಪೆಟ್ರೋಲ್ ತುಂಬಿಸಲು ಸೂಚನೆ ನೀಡಿದ ಪಕ್ಷದ ಅಧ್ಯಕ್ಷ, ಸೇವೆ ಒದಗಿಸಿದ ಪೆಟ್ರೋಲ್ ಬಂಕ್ ಮಾಲೀಕ ಹಾಗೂ ಉಚಿತ ಪೆಟ್ರೋಲ್‌ಗೆ ಚೀಟಿಗಳನ್ನು ನೀಡಿದ ‘ಶ್ರೀರಾಮ ಕಾಂಡಿಮೆಂಟ್ಸ್’ ಮಾಲೀಕರ ವಿರುದ್ಧ ಅಸಂಜ್ಞೆಯ ಪ್ರಕರಣ ದಾಖಲಾಗಿದೆ.
ಉಚಿತ ಪೆಟ್ರೋಲ್ ನೀಡುತ್ತಿರುವ ದೂರಿನ ಹಿನ್ನೆಲೆಯಲ್ಲಿ ತಹಶೀಲ್ದಾರ್ ಜೊತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. 16ಕ್ಕೂ ಹೆಚ್ಚು ಟೋಕನ್ ಪತ್ತೆಯಾಗಿವೆ. ಪೆಟ್ರೋಲ್ ನೀಡಿ ಆಮಿಷವೊಡ್ಡಿದ ಆಧಾರದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ’ ಎಂದು ಚುನಾವಣಾಧಿಕಾರಿ ಎಂ.ಮಹೇಂದ್ರಕುಮಾರ್ ಮಾಹಿತಿ ನೀಡಿದ್ದಾರೆ.
ಶುಕ್ರವಾರ ನಡೆದ ಬಿಜೆಪಿಯ ದ್ವಿಚಕ್ರ ವಾಹನ ಜಾಥಾಗೆ ಬೆಳಿಗ್ಗೆ 6ರಿಂದ ಮಧ್ಯಾಹ್ನ 2ಗಂಟೆಯವರೆಗೆ ಈ ಬಂಕ್‌ನಲ್ಲಿ ಉಚಿತ ಪೆಟ್ರೋಲ್ ನೀಡಲಾಗಿದೆ. ‘ಶ್ರೀರಾಮ ಕಾಂಡಿಮೆಂಟ್ಸ್’ ಹೆಸರಿನ ಟೋಕನ್‌ಗಳನ್ನು ಹಿಡಿದ ಬೈಕ್ ಸವಾರರು ಪೆಟ್ರೋಲ್‌ಗೆ ಸರತಿಯಲ್ಲಿ ಕಾಯುತ್ತಿದ್ದರು’ ಎಂದು ವಿಚಕ್ಷಣಾ ದಳದ ಸುನೀಲ್ ಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.