ಜುಲೈ 1 ರಿಂದ ಶೇ.20 ರಷ್ಟು ಖಾಸಗಿ ಬಸ್ ಪ್ರಯಾಣ ದರ ಹೆಚ್ಚಳ, ಪ್ರಯಾಣಿಕರಿಗೆ ಹೆಚ್ಚಿದ ಹೊರೆ
ದಾವಣಗರೆ: ಸತತ ಎರಡು ತಿಂಗಳು ಕಾಲ ಖಾಸಗಿ ಬಸ್ ಓಡದ ಕಾರಣ ಮಾಲೀಕರು ಸಂಕಷ್ಟದಲ್ಲಿದ್ದು, ಆರು ತಿಂಗಳ ತೆರಿಗೆ ವಿನಾಯಿತಿ ನೀಡುವುದರ ಜೊತೆಗೆ ಸಾಲದ ಕಂತು ಪಾವತಿಯನ್ನು ಡಿಸೆಂಬರ್ ವರೆಗೆ ಮುಂದೂಡಬೇಕೆಂದು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಎಸ್.ಮಂಜುನಾಥ್ ಒತ್ತಾಯಿಸಿದರು.
ನಗರದ ಖಾಸಗಿ ಹೊಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕೊರೊನಾ ಕಾರಣ ವಿಧಿಸಿದ್ದ ಲಾಕ್ ಡೌನ್ ಪರಿಣಾಮ ಖಾಸಗಿ ಬಸ್ ಮಾಲೀಕರು ತೀವ್ರ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಆದರೆ, ಸರ್ಕಾರ ನಮಗೆ ಯಾವುದೇ ರೀತಿ ಸ್ಪಂದಿಸಿಲ್ಲ ಎಂದು ಆರೋಪಿಸಿದರು. ಖಾಸಗಿ ಬಸ್ ಮಾಲೀಕರು ಡೀಸೆಲ್, ಟೈರ್ ಸೇರಿದಂತೆ ಇತರೆ ಬಿಡಿ ಭಾಗಗಳ ಖರೀದಿ ಮೂಲಕ ಸರ್ಕಾರಕ್ಕೆ ವರ್ಷಕ್ಕೆ ಕೋಟ್ಯಂತರ ರೂ. ತೆರಿಗೆ ಪಾವತಿಸುತ್ತಿದ್ದೇವೆ.
ಅಲ್ಲದೆ, ವರ್ಷಕ್ಕೆ ನೂರಾರು ಕೋಟಿ ರಸ್ತೆ ತೆರಿಗೆಯೂ ಪಾವತಿಸುತ್ತಿದ್ದೇವೆ. ಆದರೆ, ಸರ್ಕಾರ ನಮ್ಮ ಸಂಕಷ್ಟಕ್ಕೆ ಸ್ಪಂದಿಸದಿರುವುದು ಅತ್ಯಂತ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಕ್ಣವೇ ಸರ್ಕಾರ ಬಸ್ ಮಾಲೀಕರ ಸಂಕಷ್ಟ ಅರಿತು, ರಸ್ತೆ ತೆರಿಗೆ ಪಾವತಿಗೆ ವಿನಾಯಿತಿ ನೀಡಬೇಕು. ಸಾಲದ ಕಂತು ಭರಿಸುವುದನ್ನು ಡಿಸೆಂಬರ್ ವರೆಗೆ ಮುಂದೂಡಬೇಕೆಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಘದ ಸತೀಶ್, ಭೈರ ಮಹೇಶ ಪಲ್ಲಾಗಟ್ಟೆ ಮತ್ತಿತರರಿದ್ದರು
ಲಾಕ್ಡೌನ್ ಸಡಿಲಿಸಿರುವ ಸರ್ಕಾರ ಬಸ್ ಓಡಾಟಕ್ಕೆ ಜೂನ್ ೨೧ರಿಂದ ಅನುಮತಿ ನೀಡಿದೆ. ಆದರೆ, ಏಳೆಂಟು ದಿನ್ ಬಸ್ ಓಡಿಸಲು ತಿಂಗಳ ೪೭,೯೫೨ ರೂ ಪಾವತಿಸಬೇಕಾಗಿದೆ. ಹೀಗಾಗಿ, ಜುಲೈ ಒಂದರಿಂದ ಖಾಸಗಿ ಬಸ್ ಓಡಿಸಲಾಗುವುದು . ಡೀಸೆಲ್ ದರ ಹೆಚ್ಚಿರುವುದರಿಂದ ಜುಲೈ ೧ರಿಂದ ಶೇ.೨೦ ರಷ್ಟು ಬಸ್ ಪ್ರಯಾಣ ದರ ಹೆಚ್ಚಿಸಲಾಗುವುದು .
– ಎಸ್.ಮಂಜುನಾಥ್
ಖಾಸಗಿ ಬಸ್ ಮಾಲೀಕರ ಸಂಘ