ನೂತನ ಶಿಕ್ಷಣ ನೀತಿಯಲ್ಲಿ ಕನ್ನಡ ಭಾಷಾ ವಿಷಯ ಬೋಧನಾ ಅವಧಿಯನ್ನ ವಿಸ್ತರಿಸಿ – ಕನ್ನಡ ಅಧ್ಯಾಪಕರ ವೇದಿಕೆ ಒತ್ತಾಯ

ದಾವಣಗೆರೆ: 2020 ರ ರಾಷ್ಟ್ರೀಯ ನೂತನ ಶಿಕ್ಷಣ ನೀತಿಯಲ್ಲಿ ಸ್ನಾತಕ ಪದವಿ ಶಿಕ್ಷಣದಲ್ಲಿ ಕನ್ನಡ ಭಾಷಾ ವಿಷಯ ಬೋಧನಾ ಅವಧಿಯನ್ನು ವಿಸ್ತರಿಸುವಂತೆ ದಾವಣಗೆರೆ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಾಪಕರ ವೇದಿಕೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದೆ.

ನೂತನ ಶಿಕ್ಷಣ ನೀತಿ ಅನ್ವಯ ಸ್ನಾತಕ ಪದವಿಯನ್ನು ನಾಲ್ಕು ವರ್ಷಕ್ಕೆ ವಿಸ್ತರಿಸಲಾಗಿರುವುದು ಶ್ಲಾಘನೀಯ. ಈ ಹಿಂದೆ ಮೂರು ವರ್ಷದ ಸ್ನಾತಕ ಪದವಿ ಯಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಎರಡು ವರ್ಷದ ಅವಧಿಗೆ ಬೋಧಿಸಲು ಅವಕಾಶವಿತ್ತು. ಆದರೆ, ಈಗ ಜಾರಿಯಾಗುತ್ತಿರುವ ಸ್ನಾತಕ ಪದವಿ ಶಿಕ್ಷಣದಲ್ಲಿ ಕನಿಷ್ಠ ಮೂರು ವರ್ಷಗಳಿಗೆ ಭಾಷಾ ವಿಷಯವಾಗಿ ಕನ್ನಡವನ್ನು ಒಂದು ವರ್ಷಕ್ಕೆ ಮಾತ್ರ ಸೀಮಿತಗೊಳಿಸಿರುವುದು ಆತಂಕಕಾರಿ ವಿಷಯವಾಗಿದ್ದು, ಇದನ್ನು ಪರಿಷ್ಕರಿಸಿ ಮೂರು ವರ್ಷಕ್ಕೆ ಕನ್ನಡ‌ ಬೋಧನೆಗೆ ಅವಕಾಶ ಮಾಡುವಂತೆ ವೇದಿಕೆಯ ಅಧ್ಯಾಪಕರುಗಳು ಉಪಮುಖ್ಯಮಂತ್ರಿ ಸಿ.ಎಸ್.ಅಶ್ವಥ್ ನಾರಾಯಣ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಯಾವುದೇ ವಿಶೇಷ ವಿಷಯದಲ್ಲಿ ಪದವಿ ವ್ಯಾಸಂಗ ಮಾಡುವವರಿಗೆ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ, ರಂಗಭೂಮಿ, ಬುಡಕಟ್ಟು, ಜನಪದ ವಿಷಯಗಳು ಪರಿಚಯವಾಗಲೇಬೇಕು. ಇದು ಕೇವಲ ಕುರುಡು ಭಾಷಾಭಿಮಾನದ ಪ್ರಶ್ನೆಯಲ್ಲ, ಕನ್ನಡದ ಅಸ್ಮಿತೆಯ ಪ್ರಶ್ನೆಯಾಗಿದೆ.

ಆದರೆ, ಉನ್ನತ ಶಿಕ್ಷಣದಲ್ಲಿ ಸ್ನಾತಕ ಪದವಿಯಲ್ಲಿ ಕನ್ನಡ ಮತ್ತು ಇತರ ಭಾಷಾ ವಿಷಯಗಳನ್ನು ಒಂದು ವರ್ಷಕ್ಕೆ ಮಾತ್ರ ಸೀಮಿತಗೊಳಿವುದು ಅತ್ಯಂತ ಆತಂಕಕಾರಿಯಾದ ವಿಷಯವಾಗಿದೆ. ಇದರಿಂದ ಕನ್ನಡ ಭಾಷಾ ಅಧ್ಯಯನಕ್ಕೆ ವಿದ್ಯಾರ್ಥಿಗಳ ಸಂಖ್ಯೆಯು ಕಡಿಮೆಯಾಗುವುದಲ್ಲದೆ, ಕನ್ನಡಿಗರಿಗೆ ಉದ್ಯೋಗ ಅವಕಾಶವು ಕ್ಷೀಣಿಸುತ್ತದೆ ಎಂದು‌ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಪದವಿಯಲ್ಲಿ ಕನ್ನಡವನ್ನು ಭಾಷಾ ವಿಷಯವಾಗಿ ಕಲಿಸುವ ಮೂಲಕ ಉತ್ತಮ ಸಂಸ್ಕಾರ, ಸಂಸ್ಕೃತಿ, ಪರಂಪರೆ, ಸಾಹಿತ್ಯ ಮತ್ತು ಮಾನವೀಯ ಮೌಲ್ಯಗಳನ್ನು ಭಾಷೆಯ ಮೂಲಕ ತಿಳಿಸಲು ಸಾಧ್ಯವಿರುವ ಕಾರಣ ಕನ್ನಡ ಭಾಷೆಯನ್ನು ಅಧ್ಯಯನ ಮಾಡುವುದು ಅವಶ್ಯಕವಾಗಿದೆ.ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ನಾಲ್ಕು ವರ್ಷದ ಸ್ನಾತಕ ಪದವಿಯಲ್ಲಿ ವಿದ್ಯಾರ್ಥಿಗಳು ಕನ್ನಡವನ್ನು ಅವಶ್ಯಕ ಮತ್ತು ಐಚ್ಛಿಕವಾಗಿ ಅಧ್ಯಯನ ಮಾಡಲು ಅವಕಾಶ

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕನ್ನಡ ಜ್ಞಾನದ ಮೂಲಕ ಉದ್ಯೋಗ ಸೃಷ್ಟಿಗೆ ಪೂರಕವಾದ ಹಾಗೂ ಜೀವ ಮತ್ತು ಜೀವನೋಪಾಯದ ಕೌಶಲ್ಯಗಳನ್ನು ಆಧರಿಸಿದ ಅಧ್ಯಯನಕ್ಕೆ ಒತ್ತು ನೀಡುವುದು. ರಾಜ್ಯ ಮತ್ತು ಕೇಂದ್ರ ಸರ್ಕಾರ ನಡೆಸುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳು ಕನ್ನಡ ಮಾಧ್ಯಮದಲ್ಲಿರುವಂತೆ ಗಮನಹರಿಸಿ, ಅದರಲ್ಲಿ ಕಡ್ಡಾಯವಾಗಿ ಕನ್ನಡ ಭಾಷಾಜ್ಞಾನದ ಪತ್ರಿಕೆಯನ್ನು ನಿಗದಿಗೊಳಿಸಬೇಕು.

ನಾಲ್ಕು ವರ್ಷಗಳ ಸ್ನಾತಕ ಪದವಿಯಲ್ಲಿ ಕನ್ನಡ ಮತ್ತು ಇತರೇ ಭಾಷೆಯ ಕಲಿಕೆಯನ್ನು ನಾಲ್ಕು ವರ್ಷಗಳ ಕಲಿಕೆಗೆ ವಿಸ್ತರಿಸುವುದು. ಎಲ್ಲಾ ವೃತ್ತಿಪರ ಕೋರ್ಸುಗಳಲ್ಲಿಯೂ ಕನ್ನಡವನ್ನು ಕನಿಷ್ಠ ಎರಡು ವರ್ಷಗಳ ಅವಧಿಯ ಅಧ್ಯಯನ ಕಡ್ಡಾಯಗೊಳಿಸುವುದು ಅಗತ್ಯವಾಗಿದೆ.

ಆದ್ದರಿಂದಾಗಿ ಈ ನೀತಿಯಲ್ಲಿ ಒಂದು ವರ್ಷಕ್ಕೆ ಕನ್ನಡ ವಿಷಯವನ್ನು ಸೀಮಿತಗೊಳಿಸದೆ ನಾಲ್ಕು ವರ್ಷಗಳಿಗೆ ವಿಸ್ತರಿಸಿ, ಕರ್ನಾಟಕದಲ್ಲಿ ಕನ್ನಡ ವಿಷಯದ ಬೋಧನೆಗೆ ಅನುವು ಮಾಡಿ ಕೊಡಬೇಕೆಂದು ವೇದಿಕೆಯ ಮೂಲಕ ಒತ್ತಾಯಿಸುತ್ತೇವೆ ಎಂದು ಡಾ.ಮಲ್ಲಿಕಾರ್ಜುನ ಕೆ. ಡಾ.ಬಸಪ್ಪ, ಹೆಚ್.ಗಿರಿಸ್ವಾಮಿ, ಡಾ.ನಾರಾಯಣಸ್ವಾಮಿ, ಡಾ.ದಾಪೀರ್ ನವಿಲೇಹಾಳ್, ಡಾ.ಮಂಜಪ್ಪ, ಡಾ.ಹೆಚ್.ವಿಶ್ವನಾಥ ಇವರು ಕುಲಪತಿಗಳಿಗೆ ಹಾಗೂ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!