ಹರೀಶ್ ಹಳ್ಳಿ ಸಾವಿನ ಪ್ರಕರಣ: ಎಸ್ ಐ ಕೃಷ್ಣಪ್ಪ, ಪೇದೆ ದೇವರಾಜ್ ಸಸ್ಪೆಂಡ್: ಸಿಐಡಿ ತನಿಖೆ ಪ್ರಾರಂಭ – ಎಸ್ ಪಿ

ದಾವಣಗೆರೆ: ಆರ್‌ಟಿಐ ಕಾರ್ಯಕರ್ತ ಹರೀಶ್ ಹಳ್ಳಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ ಹಿನ್ನೆಲೆಯಲ್ಲಿ ಗಾಂಧಿನಗರ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಕೃಷ್ಣಪ್ಪ ಹಾಗೂ ಕಾನ್‌ಸ್ಟೆಬಲ್ ದೇವರಾಜ್ ಅವರನ್ನು ಅಮಾನತು ಮಾಡಲಾಗಿದೆ.
ಆರೋಪಿಯ ಪಕ್ಕದಲ್ಲಿ ಕುಳಿತಿದ್ದ ಪಿಎಸ್‌ಐ ಮತ್ತು ಒಬ್ಬ ಕಾನ್‌ಸ್ಟೆಬಲ್ ಅಮಾನತು ಮಾಡಲಾಗಿದ್ದು, ಪ್ರಕರಣವನ್ನು ಸಿಐಡಿ ಕೈಗೆತ್ತಿಕೊಂಡಿದೆ.
ಡಿಎಸ್ಪಿ ನೇತೃತ್ವದ ಸಿಐಡಿಯ ನಾಲ್ವರು ಸದಸ್ಯರ ತಂಡ ಇಂದು ಸ್ಥಳಕ್ಕೆ ಭೇಟಿ ನೀಡಿದ್ದು, ಮುಂದಿನ ತನಿಖೆ ನಡೆಸಲಿದ್ದಾರೆ ಎಂದು ಎಸ್ಪಿ ಅರುಣ್ ತಿಳಿಸಿದ್ದಾರೆ.
ನಿವೇಶನಗಳನ್ನು ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಳ್ಳಲು ನಕಲಿ ದಾಖಲೆ ಸೃಷ್ಟಿಸಿದ ಆರೋಪದಡಿ ದಾಖಲಾಗಿದ್ದ ಪ್ರಕರಣದ ವಿಚಾರಣೆಗಾಗಿ ಪೊಲೀಸರು ಹರೀಶ್ ಹಳ್ಳಿ ಅವರನ್ನು ಭಾನುವಾರ ತಡರಾತ್ರಿ ಕಾಕನೂರಿನಲ್ಲಿ ವಶಕ್ಕೆ ಪಡೆದು ಕಾರಿನಲ್ಲಿ ದಾವಣಗೆರೆಗೆ ಕರೆದುಕೊಂಡು ಬರುತ್ತಿದ್ದರು.
ತೋಳಹುಣಸೆ ಬಳಿ ಬಂದಾಗ ಹರೀಶ್ ಅವರು ತಪ್ಪಿಸಿಕೊಂಡು ಮೇಲ್ಸೇತುವೆಯಿಂದ ಜಿಗಿದು ಸರ್ವೀಸ್ ರಸ್ತೆಗೆ ಬಿದ್ದಿದ್ದರಿಂದ ಗಾಯಗೊಂಡು ಮೃತಪಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದರು. ತಮ್ಮ ಪತಿಯನ್ನು ಪೊಲೀಸರೇ ಕೊಲೆ ಮಾಡಿದ್ದಾರೆ ಎಂದು ಹರೀಶ್ ಅವರ ಪತ್ನಿ ಕೆ.ಆರ್. ಲತಾ ದೂರು ನೀಡಿದ್ದರು.