ರಾಜ್ಯದ ಕಮಲ ಪಾಳಯದಲ್ಲಿ ತಳಮಳ.. ಸಿಎಂ ಬೊಮ್ಮಾಯಿ ಬದಲಾವಣೆಗೆ ‘ಹೈ’ ಚಿಂತನೆ..!?

basavaraj bommai

ದೆಹಲಿ: ರಾಜ್ಯ ಕಮಲ ಪಾಳಯದಲ್ಲಿ ತಳಮಳದ ಸನ್ನಿವೇಶ ಸೃಷ್ಟಿಯಾಗಿದೆ. ಸಂಪುಟ ಸರ್ಜರಿಗೆ ಮೂಲ ಬಿಜೆಪಿ ಶಾಸಕರು ಒತ್ತಡ ತಂತ್ರ ಹೇರುತ್ತಿರುವಂತೆಯೇ ಮತ್ತೊಂದೆಡೆ ಸಚಿವರ ಉಸ್ತುವಾರಿ ಜಿಲ್ಲೆಗಳ ಅದಲು ಬದಲು ಕ್ರಮ ಕೂಡಾ ಹಲವರ ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿದೆ. ಇದರ ಜೊತೆಯಲ್ಲೇ ಅತ್ತ ವರಿಷ್ಠರ ಅಂಗಳದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚಿಂತನೆ ನಡೆದಿದೆ ಎಂಬ ಸುದ್ದಿ ಪ್ರತಿಧ್ವನಿಸಿದೆ.

ಏನಿದು ಅಚ್ಚರಿಯ ಸನ್ನಿವೇಶ.‌?

ಜಿಂದಾಲ್ ಭೂ ಅಕ್ರಮ ಸಹಿತ ಹಲವು ಆರೋಪಗಳು ಕೇಳಿಬಂದ ಸಂದರ್ಭದಲ್ಲಿ ಬಿಜೆಪಿ ಹೈಕಮಾಂಡ್ ಸೂಚನೆಯಂತೆ ಕೆಲವು ತಿಂಗಳ ಹಿಂದಷ್ಟೇ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ರಾಜೀನಾಮೆ ಪಡೆದಿದ್ದರು. ಅವರ ಸ್ಥಾನಕ್ಕೆ ಮೂಲ ಬಿಜೆಪಿಗರೆನಿಸಿದ್ದ ಅರವಿಂದ್ ಬೆಲ್ಲದ್, ಬಸನಗೌಡಪಾಟೀಲ್ ಯತ್ನಾಳ್, ಜಗದೀಶ್ ಶೆಟ್ಟರ್ ಅವರ ಪೈಕಿ ಸಮರ್ಥರೊಬ್ಬರ ಆಯ್ಕೆಗೆ ವರಿಷ್ಠರು ಮುಂದಾಗಿದ್ದರಾದರೂ ಬಿಎಸ್‌ವೈ ಅವರ ಒತ್ತಡ ತಂತ್ರಕ್ಕೆ ಮಣಿದು ಬಸವರಾಜ್ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಅದಾಗಲೇ ಬೊಮ್ಮಾಯಿ ಅವರು ಜನತಾಪರಿವಾರ ಮೂಲದವರೆಂಬ ಅಸಮಾಧಾನ ಆರೆಸ್ಸೆಸ್-ಹಾಗೂ ಬಿಜೆಪಿ ಪಾಳಯದಲ್ಲಿ ವ್ಯಕ್ತವಾಯಿತು‌. ಆದರೂ ಹೈಕಮಾಂಡ್ ತೀರ್ಮಾನವನ್ನು ಕಾರ್ಯಕರ್ತರು ಗೌರವಿಸಲೇಬೇಕಾಯಿತು.
ಆದರೆ ಇದೀಗ ಮತ್ತೆ ಅಸಮಾಧಾನ ಹೊಗೆಯಾಡತೊಡಗಿದೆ. ಅದೂ ಕೂಡಾ ಸಿಎಂ ಬಸವರಾಜ್ ಬೊಮ್ಮಾಯಿ ಆಡಳಿತ ವೈಖರಿ ಬಗ್ಗೆಯೇ ಬಿಜೆಪಿ ವರಿಷ್ಠರು ಅಸಮಾಧಾನಗೊಂಡಿದ್ದರೆನ್ನಲಾಗಿದೆ. ಅಷ್ಟೇ ಅಲ್ಲ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಬದಲಾಯಿಸಲು ಮುಂದಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಬಿತ್ತರಿಸಿವೆ. ಇತ್ತೀಚಿನ ಉಪಚುನಾವಣೆಯಲ್ಲಿ ಸಿಎಂ ತವರು ಜಿಲ್ಲೆಯಲ್ಲೇ ಬಿಜೆಪಿ ಸೋಲುಂಡಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ, ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲೂ ನಿರೀಕ್ಷಿತ ಫಲಿತಾಂಶ ಬಂದಿಲ್ಲ ಎಂಬುದು ವರಿಷ್ಠರ ಅಸಮಾಧಾನ. ಹಾಗಾಗಿ ಪ್ರಸ್ತುತ ಇರುವ ನಾಯಕರ ಮುಂದಾಳುತ್ವದಲ್ಲೇ ಮುಂಬರುವ 2023ರ ಚುನಾವಣೆ ಎದುರಿಸಲು ಸಾಧ್ಯವಿಲ್ಲ ಎಂದು ದೂರದ ಆಲೋಚನೆ ಮಾಡಿರುವ ದಿಲ್ಲಿ ವರಿಷ್ಠರು, ಸಮರ್ಥ ಹಾಗೂ ಮೂಲ ಬಿಜೆಪಿಗರೊಬ್ವರನ್ನು ಮುಖ್ಯಮಂತ್ರಿಯನ್ನಾಗಿಸಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಇದೇ ವೇಳೆ, ಈಶ್ವರಪ್ಪ, ಮುರುಗೇಶ್ ನಿರಾಣಿ, ಸಿ.ಸಿ.ಪಾಟೀಲ್ ಸಹಿತ ಹಲವು ಸಚಿವರನ್ನು ಸಂಪುಟದಿಂದ ಕೈಬಿಟ್ಟು ಪಕ್ಷ ಸಂಘಟನೆಯಲ್ಲಿ ತೊಡಗಿಸಲು ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!