ಜಿ.ಎಂ.ಐ.ಟಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
ದಾವಣಗೆರೆ: ನಗರದ ಪ್ರತಿಷ್ಠಿತ ಜಿ.ಎಂ ತಾಂತ್ರಿಕ ಮಹಾವಿಧ್ಯಾಲಯದ ಸಿವಿಲ್ ವಿಭಾಗದ ಸರ್.ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಾಧ್ಯಾಪಕಿಯರು ಕೆನೆ ಮತ್ತು ಬಂಗಾರ ಬಣ್ಣದ ಉಡುಗೆಯಲ್ಲಿ ಕಂಗೊಳಿಸುತ್ತಿದ್ದರು. ಮಹಿಳಾ ಸಬಲೀಕರಣ, ಮಹಿಳೆಯರ ಹಕ್ಕುಗಳ ರಕ್ಷಣೆ, ಸಮಾನತೆಯ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯುವ ಉದ್ದೇಶದಿಂದ ಪ್ರತಿ ವರ್ಷವು ಮಾರ್ಚ್ 8ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಿಲ್ಪ ವೈ.ಎಸ್, ಪೊಲೀಸ್ ಇನ್ಸ್ಪೆಕ್ಟರ್ ಮಹಿಳಾ ಪೊಲೀಸ್ ಸ್ಟೇಷನ್, ಇವರು ಆಗಮಿಸಿ ಅಡುಗೆ ಮನೆಯಿಂದ ಆಕಾಶದವರೆಗೂ ಮಹಿಳೆಯರ ಸಾಧನೆಯು ಸವಿಸ್ತಾರವಾಗಿ ಹಬ್ಬಿಕೊಂಡಿದೆ. ಹುಟ್ಟಿನಿಂದ ತಂದೆ ತಾಯಿಗೆ ಮುದ್ದಿನ ಮಗಳಾಗಿ, ಸಹೋದರ ಮತ್ತು ಸಹೋದರಿಯರಿಗೆ ಮಾರ್ಗದರ್ಶಕಿಯಾಗಿ, ಪತಿಗೆ ಸದೃಹಿಣಿಯಾಗಿ, ಮಕ್ಕಳಿಗೆ ಮಾತೃತ್ವದ ಸಿಹಿಯ ಉಣಿಸಿ, ಇತರ ಕಾರ್ಯಕ್ಷೇತ್ರದಲ್ಲಿ ತನ್ನದೇ ಆದಂತಹ ಛಾಪು ಮೂಡಿಸಿ ಎಲ್ಲಾ ಜವಾಬ್ದಾರಿಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸುವ ಕೌಶಲ್ಯವನ್ನು ಹೊಂದಿರಬೇಕು ಮತ್ತು ಹೆಣ್ಣುಮಕ್ಕಳು ಸದಾ ಎಚ್ಚರದ ಸ್ಥಿತಿಯಲ್ಲಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಮೂಲ್ಯ ಸಮಯವನ್ನು ವ್ಯಯಿಸಬಾರದು, ಹೆಣ್ಣು ವಿದ್ಯೆ ಕಲಿತು ಸಬಲಳಾಗಿರಬೇಕೆಂದು ಸಲಹೆ ನೀಡಿದರು.
ದೀಪ ಬಿ.ಎಸ್ ಕನ್ನಡ ಪ್ರಾಧ್ಯಾಪಕರು, ಜಿ.ಎಂ.ಐ.ಟಿ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಆರ್ಥಿಕ ಸಬಲತೆ, ವೃತ್ತಿ ಶಿಕ್ಷಣದಲ್ಲಿ ಸಮಯದ ಸದುಪಯೋಗ, ವೃತ್ತಿ ಜೀವನದಲ್ಲಿ ಎದುರಿಸಬೇಕಾಗಿರುವ ಸಮಸ್ಯೆಗಳು ಮತ್ತು ಪರಿಹಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಹೇಳಿದರು. ಪ್ರಾಂಶುಪಾಲರಾದ ಡಾ. ವೈ. ವಿಜಯ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆಣ್ಣುಮಕ್ಕಳು ವೃತ್ತಿ ಶಿಕ್ಷಣದ ಜೊತೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಎಎಸ್, ಐಪಿಎಸ್ ಮತ್ತು ಐಇಎಸ್‌ಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು. ಈ ವಿಚಾರವಾಗಿ ಕಾಲೇಜಿನ ಮಂಡಳಿಯು ಸದಾ ಸಹಕರಿಸುತ್ತದೆ ಎಂದ ಅವರು, ಮಹಿಳಾ ದಿನಾಚರಣೆಯ ಶುಭಾಶಯವನ್ನು ಕೋರಿದರು.
ಈ ಕಾರ್ಯಕ್ರಮದಲ್ಲಿ ಮಹಿಳಾ ಕೋಶದ ಅಧ್ಯಕ್ಷೆ ಡಾ. ಲತಾ ಬಿ.ಎಂ, ಮುಖ್ಯ ಸಂಯೋಜಕಿ ಮಂಜುಳ ಬಿ.ಕೆ, ಮಹಿಳಾ ಸಬಲೀಕರಣದ ನಿರ್ದೇಶಕಿ ವೆಂಕಟಸುಮನಾ ಸಿ.ಎಚ್, ವಿಶೇಷ ಆಹ್ವಾನಿತರಾಗಿ ಕಾಲೇಜಿನ ಉದ್ಯೋಗಾಧಿಕಾರಿಗಳಾದ ತೇಜಸ್ವಿ ಕಟ್ಟಿಮನಿ, ಕಾಲೇಜಿನ ಭೋಧಕ ಮತ್ತು ಭೋಧಕೇತರ ಮಹಿಳಾ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕು. ಅನುಶ್ರೀ ಪ್ರಾರ್ಥಿಸಿದರು. ಸಾಕ್ಷಿ ಒಲಿವಿಯಾ ಸ್ವಾಗತಿಸಿದರು. ಮಧುಶ್ರೀ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಸ್ಪಂದನಾ ಮತ್ತು ತಂಡದವರು ಹಾಗೂ ಅಸ್ಫಿಯಾ ಮಹಿಳೆಯರ ಸಾಧನೆಯ ಕುರಿತು ಹಾಡು ಹಾಡಿದರು. ನಿಶ್ಮಾ ಮತ್ತು ತಂಡದವರು ಮಹಿಳೆಯರ ಮೇಲೆ ಆಗುತ್ತಿರುವ ದೌಜನ್ಯ ಮತ್ತು ಅವರ ಮೇಲುಗೈ ಸಾಧನೆಯನ್ನು ಕಿರುನಾಟಕದ ಮೂಲಕ ಪ್ರದರ್ಶಿಸಿದರು. ದೀಪ್ತಿ ಪಾಟಿಲ್ ಕವನ ಹೇಳಿದರು. ಮೆಹಕ್ ವಂದಿಸಿದರು, ನಮಿತಾ ಎಚ್.ಎನ್ ಮತ್ತು ತಾನಿಯಾ ತಿವಾರಿ ನಿರೂಪಿಸಿದರು.
ರಕ್ಷಣೆ