ಜಗಳೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ‌ಕ್ಕೆ ಪ್ರೊ.ಎಚ್. ಲಿಂಗಪ್ಪ ಸರ್ವಾಧ್ಯಕ್ಷರಾಗಿ ಆಯ್ಕೆ

ಪ್ರೊ.ಎಚ್. ಲಿಂಗಪ್ಪ

ಜಗಳೂರು : ಇದೇ ಫೆ. 25 ರಂದು ನಡೆಯಲಿರುವ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ‌ದ ಅಧ್ಯಕ್ಷರನ್ನಾಗಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಚ್. ಲಿಂಗಪ್ಪ ಅವರನ್ನು ಸರ್ವಾನುಮತದಿಂದ  ಆಯ್ಕೆ ಮಾಡಲಾಗಿದೆ ಎಂದು ಕಸಾಪ ಅಧ್ಯಕ್ಷೆ ಸುಜಾತಮ್ಮ ತಿಳಿಸಿದ್ದಾರೆ.
ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 20 ವರ್ಷಗಳ ಬಳಿಕ ತಾಲ್ಲೂಕಿನಲ್ಲಿ ಎರಡನೇ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲಾಗಿದೆ ಎಂದರು.
ದಿ. 25 ರಂದು  ಕನ್ನಡ ನುಡಿ ಜಾತ್ರೆಯು ಅದ್ದೂರಿಯಾಗಿ ಜರುಗಲಿದೆ. ಸಮ್ಮೇಳನದಲ್ಲಿ ಜಗಳೂರು ತಾಲ್ಲೂಕಿನ ಐತಿಹಾಸಿಕ ಪರಂಪರೆ, ಸಾಹಿತ್ಯಕವಾಗಿ  ಜನರಪರವಾದ ಶೈಕ್ಷಣಿಕ‌ ಸಾಂಸ್ಕೃತಿಕ ವೈಭವದ ಮೆರಗಿನ ಕನ್ನಡ ಹಬ್ಬಕ್ಕೆ ಪ್ರತಿಯೊಬ್ಬರು ಕೈಜೋಡಿಸಿ ಕೆಲಸ ಮಾಡುವಂತೆ ಮನವಿ ಮಾಡಿದರು.
ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ವಕೀಲರಾದ ಆರ್ ಒಬಳೇಶ್ ಮಾತನಾಡಿ , ಪ್ರೊ.ಎಚ್. ಲಿಂಗಪ್ಪ ಅವರು ಸಮರ್ಥವಾದ ಬರಹಗಾರರಾಗಿ 36 ಗ್ರಂಥಗಳನ್ನು ರಚಿಸಿ ಸಾಹಿತ್ಯ ದಿಗ್ಗಜರಾಗಿದ್ದಾರೆ. ಇಂತಹ ಹಿರಿಯ ಸಾಹಿತಿಗಳಿಂದ ಯುವ ಕವಿಗಳಿಗೆ ಸ್ಪೂರ್ತಿಯಾಗಲಿದೆ ಎಂದರು.
ಕಸಾಪ ಸದಸ್ಯ ನಾಗಲಿಂಗಪ್ಪ ಮಾತನಾಡಿ, ಕನ್ನಡ ನಾಡಿನ ಈ ನೆಲದ ಸಾಹಿತ್ಯ ಸಂಸ್ಕೃತಿಯ ವೈಶಿಷ್ಟ್ಯ ಪರಂಪರೆಯನ್ನು ಸಾರುವ ಕನ್ನಡ ಸಮ್ಮೇಳನವನ್ನು ಅದ್ದೂರಿಯಾಗಿ ನಡೆಸುವ ನಿಟ್ಟಿನಲ್ಲಿ ಕಾರ್ಯಗಳು ಚುರುಕುಗೊಂಡಿವೆ. ಕ್ಷೇತ್ರದ ಶಾಸಕ ಎಸ್.ವಿ. ರಾಮಚಂದ್ರ ಹಾಗೂ ತಹಶೀಲ್ದಾರ್ ಜಿ ಸಂತೋಷಕುಮಾರ್ ಸಹಕಾರದಿಂದ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದರು.
ಕಸಾಪ ಗೌರವ ಕಾರ್ಯದರ್ಶಿ ಗೀತಾಮಂಜು, ಸಂಘಟನೆ ಕಾರ್ಯದರ್ಶಿ ಚಂಪಾವತಿ, ಕಸಾಪ ಪದಾಧಿಕಾರಿಗಳಾದ  ಕೃಷ್ಣಮೂರ್ತಿ, ಗೌರಮ್ಮ , ಎಂ.ರಾಜಪ್ಪ, ಶಿಕ್ಷಕಿ ಶಿವಮ್ಮ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!