ದಾವಣಗೆರೆ ಜೈಲಿನ ಲೈಬ್ರರಿಯಲ್ಲಿತ್ತು ಗಾಂಜಾ.! ಜೈಲರ್ ಮೇಲೆ ಎಫ್‌ಐಆರ್ ದಾಖಲು ಕಾರಾಗೃಹದಲ್ಲಿ ಗಲಾಟೆ ಪ್ರಕರಣಕ್ಕೆ ಟ್ವಿಸ್ಟ್
ದಾವಣಗೆರೆ: ದಾವಣಗೆರೆ ಜಿಲ್ಲಾ ಕಾರಾಗೃಹದಲ್ಲಿ ಕಳೆದ ಜನವರಿ 28ರಂದು ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದೆ ವಿಚಾರಣಾಧೀನ ಕೈದಿಗಳ ಮಧ್ಯೆ ಮಾತಿನ ಚಕಮಕಿ, ಹೊಡೆದಾಟ ನಡೆದ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಗಲಾಟೆ ಪ್ರಕರಣ ಬೆನ್ನತ್ತಿದ್ದ ಪೊಲೀಸರಿಗೆ ಗಾಂಜಾ ವಾಸನೆ ಬಡಿದಿದೆ.
ಹೌದು, ಕಾರಾಗೃಹದಲ್ಲಿನ ಗ್ರಂಥಾಲಯದಲ್ಲಿ ಗಾಂಜಾ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಜೈಲು ಅಧಿಕಾರಿ ಹಾಗೂ ಸಿಬ್ಬಂದಿ ಸೇರಿ ಇಬ್ಬರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಸ್ಥಳೀಯ ಹಾಗೂ ಉತ್ತರ ಪ್ರದೇಶ ಮೂಲದ ವಿಚಾರಣಾಧೀನ ಕೈದಿಗಳ ಮಧ್ಯೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿತ್ತು. ಘರ್ಷಣೆಯಲ್ಲಿ ಇಬ್ಬರು ಕೈದಿಗಳ ತಲೆಗೆ ಪೆಟ್ಟಾಗಿತ್ತು.
ಗಲಾಟೆಯನ್ನು ಗಮನಿಸಿದ ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿ ತಕ್ಷಣವೇ ಧಾವಿಸಿ, ಕೈದಿಗಳನ್ನು ಚದುರಿಸಿದ್ದರು. ಘರ್ಷಣೆಯಲ್ಲಿ ಗಾಯಗೊಂಡಿದ್ದ ಇಬ್ಬರು ಕೈದಿಗಳನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ಕೊಡಿಸಲಾಗಿತ್ತು.
ಹಂದಿ ಹಣ್ಣಿ ಹುಡುಗರಿಂದ ದಾವಣಗೆರೆ ಜೈಲಿನಲ್ಲಿ ಬೇರೆ ಖೈದಿಗಳ ಜೊತೆ ಹೊಡೆದಾಟ.!
ಆರೋಪಿಗಳಾದ ಸಂಜೀತ್ ಸಿಂಗ್, ಬೊಲೆ, ಸುನೀಲ್, ಪವನಕುಮಾರ, ಅಭಿಲಾಷ್, ವೆಂಕಟೇಶ, ರಮೇಶ, ಮಂಜುನಾಥ, ಆಕಾಶ, ಹನುಮಂತ, ಇಮ್ರಾನ್ ಖಾನ್, ಸಲ್ಮಾನ್ ಖಾನ್ ವಿರುದ್ಧ ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಗಲಾಟೆ ಬಗ್ಗೆ ಸಿ.ಸಿ.ಟಿವಿ ಕ್ಯಾಮೆರಾ ಪರಿಶೀಲಿಸಲಾಗಿತ್ತು. ಇತರೆ ಕೈದಿಗಳ ಹೇಳಿಕೆ ಪಡೆದು, ಸೂಕ್ತ ತನಿಖೆ ನಡೆಸಲಾಗಿತ್ತು.
ಹಲ್ಲೆ ಮಾಡಿದ್ದ ಆರೋಪಿಗಳ ರಕ್ತ ಹಾಗೂ ಮೂತ್ರ ಪರೀಕ್ಷಿಸಿದಾಗ ಅವರು ಮಾದಕ ದ್ರವ್ಯ ಸೇವಿಸಿದ್ದುದು ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ವಿಚಾರಣೆ ತೀವ್ರಗೊಳಿಸಿದ್ದ ಪೊಲೀಸರಿಗೆ ಗ್ರಂಥಾಲಯದ ಪುಸ್ತಕದಲ್ಲಿ ಗಾಂಜಾ ಹಾಗೂ ಮೊಬೈಲ್ ಚಾರ್ಜರ್ ಕೇಬಲ್‌ಗಳು ಪತ್ತೆಯಾಗಿವೆ.