‘ಕೈ’ ಹಿಡೀತಾರ ‘ಬಿಜೆಪಿಯ ಇಬ್ಬರು ಸಚಿವರು’..? ಸೋಮಣ್ಣ, ನಾರಾಯಣಗೌಡ ಬಗ್ಗೆ ಡಿಕೆಶಿ ಹೇಳಿದ್ದು ಹೀಗೆ..!
ಬೆಂಗಳೂರು: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜ್ಯ ರಾಜಕೀಯದಲ್ಲಿ ಭರ್ಜರಿ ಬೆಳವಣಿಗೆಗಳು ನಡೆಯುತ್ತಿವೆ. ಅದರಲ್ಲೂ ಪಕ್ಷಾಂತರ ಪರ್ವ ಜೋರಾಗಿಯೇ ಸಾಗಿದೆ. ಇದೇ ವೇಳೆ ಬಿಜೆಪಿ ಸರ್ಕಾರದಲ್ಲಿರುವ ಕೆಲವು ಸಚಿವರು ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆಗಳ ಬಗ್ಗೆ ಭಾರೀ ಸುದ್ದಿಯಾಗುತ್ತಿವೆ.
ಬಿಜೆಪಿ ನಾಯಕರ ಬಗ್ಗೆ ಮುನಿಸಿಕೊಂಡಿದ್ದಾರೆ ಎನ್ನಲಾದ ಸಚಿವ ವಿ.ಸೋಮಣ್ಣ ಅವರು ಬಿಜೆಪಿಯ ಪ್ರಮುಖ ಕಾರ್ಯಕ್ರಮಗಳಿಂದ ದೂರ ಉಳಿದಿರುವ ನಿರ್ಧಾರವು ಇಂತಹ ಸುದ್ದಿಗೆ ಗುದ್ದು ಕೊಟ್ಟಿರುವುದು. ಈ ಬಗ್ಗೆ ಸೋಮಣ್ಣ ಅವರ ಆಪ್ತರ ಬಳಿ ಕೇಳಿದರೆ, ಈ ಬೆಳವಣಿಗೆಯನ್ನು ಅಲ್ಲಗಳೆಯುವ ಬದಲು ಸಚಿವರನ್ನೇ ಕೇಳಿ ಎಂಬ ಪ್ರತಿಕ್ರಿಯೆ ಸಿಗುತ್ತಿದೆ.
ಇನ್ನೊಂದೆಡೆ, ಮತ್ತೊಬ್ಬ ಸಚಿವ ನಾರಾಯಣ ಗೌಡ ಅವರೂ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವ ಸಾಧ್ಯತೆಗಳ ಬಗ್ಗೆ ಮಾತುಗಳೂ ಹರಿದಾಡುತ್ತಿವೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಸಚಿವ ನಾರಾಯಣಗೌಡರ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಕೆ.ಆರ್ ಪೇಟೆಯಲ್ಲಿ ಗಲಾಟೆ ನಡೆದಿರುವ ಬಗ್ಗೆ ಪ್ರತಿಕ್ರಿಯಿಸಿ, ‘ನಾರಾಯಣ ಗೌಡರು ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ನಮ್ಮ ಜತೆ ಮಾತನಾಡಿಲ್ಲ. ಯಾರು ಯಾರ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಗೊತ್ತಿದೆ. ನಮ್ಮ ಪಕ್ಷದಲ್ಲಿನ ಗೊಂದಲ ನಾವು ಸರಿಪಡಿಸಿಕೊಳ್ಳುತ್ತೇವೆ’ ಎಂದರು..
ಸಚಿವ ಸೋಮಣ್ಣ ಅವರು ಕಾಂಗ್ರೆಸ್ ಸೇರುವ ಸಾಧ್ಯತೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ‘ಸೋಮಣ್ಣ ಅವರು ನಮ್ಮ ಜತೆ ಈ ವಿಚಾರವಾಗಿ ಮಾತನಾಡಿಲ್ಲ. ಕನಕಪುರದಲ್ಲಿ ವಸತಿ ಸಚಿವಾಲಯದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಿ ಪತ್ರ ಬರೆದಿದ್ದಾರೆ. ಸಮಯ ನೋಡಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಯತ್ನಿಸುತ್ತೇನೆ’ ಎಂದರು.
ಪಕ್ಷ ಬಿಟ್ಟು ಹೋದವರಲ್ಲಿ ಬಹುತೇಕರು ಕಾಂಗ್ರೆಸ್ ಸೇರುತ್ತಾರೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಕುರಿತಂತೆಯೂ ಡಿ.ಕೆ.,ಶಿವಕುಮಾರ್ ಅವರು ತಮ್ಮದೇ ದಾಟಿಯಲ್ಲಿ ಪ್ರತಿಕ್ರಿಯೆ ನೀಡಿದರು. ‘ಕುಮಾರಸ್ವಾಮಿ ಅವರಿಗೆ ಯಾವ ಮಾಹಿತಿ ಇದೆಯೋ ಗೊತ್ತಿಲ್ಲ. ನಮ್ಮ ನಾಯಕತ್ವ ಒಪ್ಪಿ ಪಕ್ಷಕ್ಕೆ ವಾಪಸ್ ಬರುವುದಾದರೆ ನಂತರ ಚರ್ಚೆ ಮಾಡೋಣ’ ಎಂದರು.