ಮಾಜಿ ಸಿಎಂ ಕುಮಾರಸ್ವಾಮಿಯ ಮಾಲೀಕತ್ವದ ಕಸ್ತೂರಿ ನ್ಯೂಸ್ ಚಾನೆಲ್ ಸೇಲ್.! ಬೆಂಗಳೂರಿನ ಉದ್ಯಮಿ ಅರಮನೆ ಶಂಕರ್ ತೆಕ್ಕೆಗೆ ಮತ್ತೊಂದು ಗರಿ
ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಮಾಲೀಕತ್ವದ ಕಸ್ತೂರಿ ನ್ಯೂಸ್ ಚಾನೆಲ್ ಬೆಂಗಳೂರಿನ ಉದ್ಯಮಿ ಅರಮನೆ ಶಂಕರ್ ತೆಕ್ಕೆಗೆ ಬಂದಿದ್ದಾಗಿದೆ. ಆಡಳಿತಾತ್ಮಕವಾದ ವ್ಯವಹಾರಗಳು ಹಸ್ತಾಂತರಗೊಂಡು ಒಂದೊಳ್ಳೆ ರೇಟ್ ಗೆ ವ್ಯವಹಾರವೂ ಮುಗಿದಿದೆ.ಈಗೇನಿದ್ದರೂ ಹೊಸ ಮ್ಯಾನೇಜ್ಮೆಂಟ್ ಏನು ಮಾಡಲಿದೆ.
ಚಾನೆಲ್ ನ ನಿರ್ವಹಣೆ ಹೊತ್ತುಕೊಂಡ ತಂಡ ಹೊಸತೇನನ್ನು ತೆರೆಗೆ ತರಲಿದೆ ಎನ್ನುವ ಕುತೂಹಲ. ಆದ್ರೆ ಆ ಮಾದ್ಯಮ ಲೋಕದ ಸವಾಲನ್ನು ಎದುರಿಸೋಕೆ ನಾವು ಸಶಕ್ತ-ಸಮರ್ಥವಾಗಿದ್ದೇವೆ ಎನ್ನುವ ಮಾತು ಸಂಪಾದಕೀಯದ ಜವಾಬ್ದಾರಿ ಹೊತ್ತಿರುವವರಿಂದ ವ್ಯಕ್ತವಾಗಿದೆ. ಕಸ್ತೂರಿ ನ್ಯೂಸ್ ಚಾನೆಲ್ ಸೇಲ್ ಆಗಲಿದೆ ಎನ್ನುವ ಸುದ್ದಿಯಿಂದ ಹಿಡಿದು ಬಸವನಗುಡಿ ಮೂಲದ ಉದ್ಯಮಿಗೇನೆ ಮಾರಾಟವಾಗಿದೆ ಎನ್ನುವವರೆಗಿನ ಸುದ್ದಿಯನ್ನು ‘ಕನ್ನಡ ಫ್ಲ್ಯಾಶ್ ನ್ಯೂಸ್’ ಪ್ರಕಟಿಸಿತ್ತು. ಇದೀಗ ಎಲ್ಲಾ ಬೆಳವಣಿಗೆಗಳು ಸುಖಾಂತ್ಯ ಕಾಣುತ್ತಿರುವ ಬೆನ್ನಲ್ಲೇ ಹೊಸ ಮ್ಯಾನೇಜ್ಮೆಂಟ್ ನಿಂದ ಮಾಹಿತಿ ಪಡೆದು ಇನ್ನಷ್ಟು ಮಾಹಿತಿಗಳನ್ನು ನೀಡುವ ಪ್ರಯತ್ನ ಮಾಡಲಿದೆ.ಏಕೆಂದ್ರೆ ಆ ವಿಚಾರಗಳು ನಿಜಕ್ಕೂ ರೋಚಕವಾಗಿವೆ.
ಚಾನೆಲ್ ನ ಮಾಲೀಕತ್ವ ಹಸ್ತಾಂತರದ ಆಡಳಿತಾತ್ಮಕ-ತಾಂತ್ರಿಕವಾದ ಪ್ರಕ್ರಿಯೆ ಪೂರ್ಣಗೊಂಡಿವೆ. ಚಾನೆಲ್ ನ ಸಂಪೂರ್ಣ ಲೇ ಔಟ್ ಬದಲಾಯಿಸಲಾಗ್ತಿದೆ.ಸುದ್ದಿ ನಿರೂಪಣೆಯ ಶೈಲಿ ಬದಲಾಗ್ತಿದೆ.ಮಾದ್ಯಮ ಲೋಕದಲ್ಲಿ ವಿನೂತನ ಪ್ರಯತ್ನದ ಭಾಗವಾಗಿ ಚಾನೆಲ್ ಆಗಸ್ಟ್ ತಿಂಗಳಲ್ಲಿ ರೀ ಲಾಂಚ್ ಆಗೊಕ್ಕೆ ಭರದ ಸಿದ್ದತೆ ಶುರುವಾಗಿದೆಯಂತೆ. ಹಳೆ ಮ್ಯಾನೇಜ್ಮೆಂಟ್ ನಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ಉಳಿಸಿಕೊಂಡೇ ಹೆಚ್ಚುವರಿ ಸಿಬ್ಬಂದಿಯ ಆಯ್ಕೆ ಜುಲೈ ನಲ್ಲಿ ಆರಂಭವಾಗಲಿದೆ ಎನ್ನುತ್ತಾರೆ ಚಾನೆಲ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸುದ್ದಿ ವಿಭಾಗದ ಮುಖ್ಯಸ್ಥ ಮೈಸೂರು ಮೂಲದ ಪತ್ರಕರ್ತ ಪುಟ್ಟಪ್ಪ.
ಬದಲಾಗಲಿದೆ ಹೆಸರು-ಸ್ವರೂಪ-ನಿರೂಪಣೆಯ ಶೈಲಿ:
ಕುತೂಹಲಕರವಾಗಿರೋ ವಿಚಾರಗಳಲ್ಲಿ ಕಸ್ತೂರಿ ನ್ಯೂಸ್ ಚಾನೆಲ್ ನ ಹೆಸರೇ ಬದಲಾಗ್ತಿದೆ ಎನ್ನುವುದು ಪ್ರಮುಖವಾದದ್ದು. ಯಾರೇ ಬಂದ್ರೂ ಕಸ್ತೂರಿ ಹೆಸರನ್ನು ಬ್ರ್ಯಾಂಡ್ ಗಿರುವ ಮಹತ್ವ-ಪ್ರಾಶಸ್ತ್ಯದ ಕಾರಣಕ್ಕೆ ಉಳಿಸಿಕೊಂಡು ಹೋಗ್ತಾರೆನ್ನುವ ಮಾತಿತ್ತು.ಆದ್ರೆ ಬೃಹತ್ ಉದ್ಯಮಿಯಾಗಿರುವ ಅರಮನೆ ಶಂಕರ್ ಅವರ ವ್ಯಾಪ್ತಿಗೆ ಸಂಪೂರ್ಣ ಆಡಳಿತ ಬರುತ್ತಿದ್ದಂತೆ ಕಸ್ತೂರಿ ಹೆಸರು ‘ಪೊಲಿಟಿಕಲ್-360 ನ್ಯೂಸ್’ ಎಂದು ಬದಲಾಗುವ ನಿರ್ದಾರಕ್ಕೆ ಬರಲಾಗಿದೆ.ಸೋ ಇನ್ಮುಂದೆ ಕಸ್ತೂರಿ ಹೆಸರು ನೇಪಥ್ಯಕ್ಕೆ ಸರಿಯಲಿದೆ.ಕಸ್ತೂರಿ ಹೆಸರು “ಪೊಲಿಟಿಕಲ್ 360” ನ್ಯೂಸ್ ಎಂದು ಬದಲಾಗಲಿದೆ.ಇದು ಪಕ್ಕಾ ಎನ್ನುತ್ತಾರೆ ಮ್ಯಾನೇಜ್ಮೆಂಟ್ ಮುಖ್ಯಸ್ಥರು. “ಪೊಲಿಟಿಕಲ್ 360″ಮೀಡಿಯಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬ್ಯಾನರ್ ಅಡಿಯಲ್ಲಿ ಹೊಸ ಹೆಸರಿನೊಂದಿಗೆ ಚಾನೆಲ್ ರೀ ಲಾಂಚ್ ಆಗ್ತಿದೆ.
“ಪೊಲಿಟಿಕಲ್ 360″ನೇ ಏಕೆ:
“ಪೊಲಿಟಿಕಲ್ 360″ಎನ್ನುವುದು ಚಾನೆಲ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸುದ್ದಿ ವಿಭಾಗದ ಮುಖ್ಯಸ್ಥ ಪುಟ್ಟಪ್ಪರ ಒಡೆತನದ ಮಾದ್ಯಮ ಸಂಸ್ಥೆ. ನ್ಯೂಸ್ ಚಾನೆಲ್ ಗಳಲ್ಲಿ ಕೆಲಸ ಮಾಡಿ ಅದರಿಂದ ಹೊರ ಬಂದ ಮೇಲೆ ಸ್ವತಂತ್ರವಾಗಿ ಶುರುಮಾಡಿದ್ದೇ “ಪೊಲಿಟಿಕಲ್ 360” ಎನ್ನುವಂತ ಓಟಿಟಿ ಫ್ಲಾಟ್ ಫಾರ್ಮ್. ರಾಜಕೀಯವನ್ನು ಕೇವಲ ಒಂದು ಆಂಗಲ್ ನಲ್ಲಿ ನೋಡದೆ, ಅದನ್ನು ಪರಿಪೂರ್ಣ ಹಾಗೂ ಸಮಗ್ರವಾಗಿ ಅಂದ್ರೆ 360 ಡಿಗ್ರಿಯಲ್ಲೂ ವಿಶ್ಲೇಷಿಸುವ ಅದನ್ನು ನೋಡುಗರಿಗೆ ತಲುಪಿಸುವ ಉದ್ದೇಶದಲ್ಲಿ ಪ್ರಾರಂಭಿಸಿದ್ದೇ ಈ ಪೊಲಿಟಿಕಲ್ 360. ದೃಶ್ಯ ಮಾದ್ಯಮದಲ್ಲಿ ಹೊಸ ಪ್ರಯತ್ನ ಎಂದು ಕರೆಯಿಸಿಕೊಂಡಿತಲ್ಲದೇ ಎಲ್ಲರಿಂದ್ಲೂ ಮೆಚ್ಚುಗೆಗೆ ಪಾತ್ರವಾಯಿತು. ರಾಜಕೀಯವಾಗಿ ಒಂದಷ್ಟು ಸದ್ದು ಮಾಡಿದ ಈ “ಪೊಲಿಟಿಕಲ್ ೩೬೦” ಹೆಸರನ್ನೇ ಹೊಸ ಚಾನೆಲ್ ಗೆ ನಾಮಕರಣ ಮಾಡಲಾಗಿದೆ.ಇದರ ಅಡಿಯಲ್ಲೇ ಚಾನೆಲ್ ನಿರ್ವಹಣೆಯಾಗಲಿದೆ ಎನ್ನುತ್ತಾರೆ ಪುಟ್ಟಪ್ಪ.
ಯಾರು ಈ ಅರಮನೆ ಶಂಕರ್ .?
ಚಾನೆಲ್ ನ್ನು ಖರೀದಿಸಿರುವ ಬಸವನಗುಡಿ ಮೂಲದ ಉದ್ಯಮಿ ಅರಮನೆ ಶಂಕರ್ ಬಗ್ಗೆ ಬಹುತೇಕ ಜನರಿಗೆ ಗೊತ್ತಿರಲಿಕ್ಕಿಲ್ಲ. ಅಂದ್ಹಾಗೆ ಶಂಕರ್ ಮೂಲತಃ ಉದ್ಯಮಿ. ರಾಜಾ ಎಂಟರ್ ಪ್ರೈಸಸ್ ಎನ್ನುವ ಇವೆಂಟ್ ಮ್ಯಾನೇಜ್ಮೆಂಟ್ ಕಂಪೆನಿ ಮಾಲೀಕರು. ರಾಜಕೀಯವಾಗಿ ಜೆಡಿಎಸ್ ಜತೆ ಗುರುತಿಸಿಕೊಂಡವರು.ಮಾಜಿ ಸಿಎಂ ಕುಮಾರಸ್ವಾಮಿ ಅತ್ಯಾಪ್ತರು. ಮೊನ್ನೆ ನಡೆದ MLA ಎಲೆಕ್ಷನ್ ನಲ್ಲಿ ಬಸವನಗುಡಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಮಾದ್ಯಮ ರಂಗದ ಬಗ್ಗೆ ಆರಂಭದಿಂದಲೂ ಒಂದು ಕುತೂಹಲ ಉಳಿಸಿಕೊಂಡೇ ಬಂದಿದ್ದರು.ಕಸ್ತೂರಿ ಸೇಲ್ ಆಗಲಿದೆ ಎನ್ನುವ ಸುದ್ದಿ ಕಿವಿಗೆ ಬೀಳ್ತಿದ್ದಂಗೆ ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿ, ಕಸ್ತೂರಿ ಕೊಳ್ಳುವ ಆಸಕ್ತಿ ವ್ಯಕ್ತಪಡಿಸಿದಾಗ ಸಂತೋಷದಿಂದಲೇ ಕುಮಾರಸ್ವಾಮಿ ಒಪ್ಪಿಕೊಂಡರಂತೆ.
ಕಸ್ತೂರಿ ನ್ಯೂಸ್ ಜೆಡಿಎಸ್ ನ ಮುಖವಾಣಿಯಂತೆ ಕೆಲಸ ಮಾಡುತ್ತಿತ್ತೆನ್ನುವ ಆಪಾದನೆ ಮೊದಲಿನಿಂದಲೂ ಇತ್ತು.ಅರಮನೆ ಶಂಕರ್ ಜೆಡಿಎಸ್ ಜತೆ ಗುರುತಿಸಿಕೊಂಡಿರುವುದರಿಂದ ರಾಜಕೀಯದ ನೆರಳು ಈಗಲೂ ಮುಂದುವರೆಯಲಿದೆಯಾ ಎನ್ನುವ ಕುತೂಹಲದ ಪ್ರಶ್ನೆ ಸಹಜವಾಗೇ ಇತ್ತು. ಆದರೆ ಅಂತದ್ದ್ಯಾವುದೇ ರಾಜಕೀಯ ನೆರಳು ಚಾನೆಲ್ ನ ಮೇಲಿರುವುದಿಲ್ಲ. ಸುದ್ದಿಯನ್ನು ಯಾವುದೇ ಮರ್ಜಿ-ಮುಲಾಜಿಗೆ ಒಳಗಾಗದೆ ಇರುವುದನ್ನು ಇದ್ದಂಗೆ ನೇರವಾಗಿ-ಪಾರದರ್ಶಕವಾಗಿ-ಪೂರ್ವಾಗ್ರಹಪೀಡಿತವಾಗದೆ ಬಿತ್ತಿರುಸುವ ಕೆಲಸ ಚಾನೆಲ್ ಮಾಡಲಿದೆ.. ಈ ವಿಷಯದಲ್ಲಿ ಸಂಪೂರ್ಣ ಸ್ವಾತಂತ್ರ್ಯ ಹೊಂದಿದ್ದಾರೆ ಎನ್ನಲಾಗ್ತಿದೆ.
ರಾಜಕೀಯವೇ ಚಾನೆಲ್ ನ ಜೀವಾಳ:
ಹೊಸತೇನೇ ಪ್ರಯತ್ನ ನಡುದ್ರೂ ಮಾದ್ಯಮ ಕ್ಷೇತ್ರದಲ್ಲಿ ಅದಕ್ಕೊಂದು ಸ್ಥಾನ ಇದ್ದೇ ಇರುತ್ತೆ.ಜನ ಅದನ್ನು ರಿಸೀವ್ ಮಾಡಿಕೊಳ್ತಾರೆ.ಇವತ್ತು ವೀಕ್ಷಕರು ಮಾದ್ಯಮಗಳ ಬಗ್ಗೆ ಅದರಲ್ಲೂ ನ್ಯೂಸ್ ಚಾನೆಲ್ ಗಳ ಬಗ್ಗೆ ರೋಸಿ ಹೋಗಿರೊಕ್ಕೆ ಕಾರಣವೇ ಆ ಏಕತಾನತೆ.ಒಂದು ಚಾನೆಲ್ ಮಾಡಿದ ಸುದ್ದಿಯನ್ನೇ ಎಲ್ಲಾ ಚಾನೆಲ್ ಗಳು ರಿಪೀಟ್ ಮಾಡಿ ತೋರಿಸಿ..ತೋರಿಸಿ ಸತ್ವಹೀನಗೊಳಿಸುತ್ತಿವೆ. ಹೊಸತನ,ಕುತೂಹಲ,ಸತ್ಯದ ಹೊರತಾಗಿ ಸುದ್ದಿಯನ್ನು ವರದಿ ಮಾಡುವಂಥ ಸಂಪ್ರದಾಯವೇ ಮಾಮೂಲಾಗಿ ಹೋಗಿದೆ.ನಮಗಿರುವ ಸವಾಲು ಅದೇ ಆಗಿತ್ತು.ಆದ್ರೆ ಆ ಸವಾಲನ್ನು ಹೇಗೆ ಎದುರಿಸಬೇಕೆನ್ನುವುದಕ್ಕೆ ನಮ್ಮಲ್ಲಿ ಸ್ಪಷ್ಟತೆಯಿದೆ. ಅಲ್ಲದೇ ವೀಕ್ಷಕರನ್ನು ಹೇಗೆ ಸೆಳೆದಿಡಬೇಕು.ಅವರ ಪಲ್ಸ್ ಏನೆನ್ನುವುದು ತಿಳಿದಿದೆ.ಅವರು ಇಷ್ಟಪಡುವ ರೀತಿ,ಒಪ್ಪುವ ರೀತಿ ಸುದ್ದಿಯನ್ನು ಹೇಗೆ ಕೊಡಬೇಕೆನ್ನುವ ಅರಿವು ನಮಗಿದೆ.ಹಾಗಾಗಿ ಹೊಸತನವನ್ನೇ ರೂಢಿಸಿಕೊಂಡು ವೀಕ್ಷಕರ ಮುಂದೆ ಬರಲಿದ್ದೇವೆ.
ರಾಜಕೀಯವೇ ನಮ್ಮ ಚಾನೆಲ್ ನ ಜೀವಾಳ-ಸತ್ಯ ಎಲ್ಲಾ.. ಏಕೆಂದ್ರೆ ನಮ್ಮ ಜೀವನಕ್ರಮದಲ್ಲೆಲ್ಲಾ ರಾಜಕೀಯ ಬೆರೆತೋಗಿದೆ.ಆದ್ರೆ ಅದನ್ನು ಗುರುತಿಸುವಲ್ಲಿ ನಾವು ಎಡವುತ್ತಿದ್ದೇವೆ.ನಮ್ಮ ಚಾನೆಲ್ ನ ಮುಖ್ಯ ಗುರಿ ಅದೇ.ರಾಜಕೀಯವನ್ನೇ ಮುಖ್ಯ ವಿಷಯವನ್ನಾಗಿಟ್ಟುಕೊಂಡು ಸುದ್ದಿ ಪ್ರಸಾರ ಮಾಡಲಿದ್ದೇವೆ.ಕೇಳುವವರಿಗೆ ಇದು ವಿಚಿತ್ರ..ಅದ್ಹೇಗೆ ಸಾಧ್ಯ ಎನ್ನಿಸಬಹುದು.ಆದ್ರೆ ನಾವು ಕಾರ್ಯರೂಪಕ್ಕೆ ತಂದು ಅದು ಸಾಧ್ಯ ಮಾಡಲಿದ್ದೇವೆ.ಈ ಪ್ರಯತ್ನದಲ್ಲಿ ನಮಗೆ ಯಶಸ್ಸು ಸಿಗುವುದಲ್ಲದೇ ಉದ್ದೇಶವೂ ಸಾರ್ಥಕವಾಗಲಿದೆ ಎನ್ನುವ ನಂಬಿಕೆ ನಮ್ಮದು ಎನ್ತಾರೆ ಸಂಪಾದಕೀಯ ಟೀಮ್.
ಮೆಟ್ರೋ-ಕ್ರೈಮ್-ಸಿನೆಮಾ ಇರೋದಿಲ್ವೇ..?
ಇಲ್ಲ ಎನ್ನುತ್ತಾರೆ ಚಾನೆಲ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸುದ್ದಿ ವಿಭಾಗದ ಮುಖ್ಯಸ್ಥ ಪುಟ್ಟಪ್ಪ. ರಾಜಕೀಯ ಬಿಟ್ಟರೆ ಬೇರೆ ಯಾವುದೇ ಬ್ಯೂರೋಗಳು ಇರುವುದಿಲ್ಲ. ಈ ವಿಷಯಗಳಿಗೆ ಸಂಬಂಧಿಸಿದಂತೆ ಏನಾದರೊಂದು ಮಹತ್ವದ ಘಟನೆ ನಡೆದಾಗ ಅದನ್ನು ವರದಿ ಮಾಡುವುದಿಲ್ಲವೇ..? ಎಂದು ಕೇಳಿದ್ದಕ್ಕೆ ಆ ವಿಷಯಗಳಿಗೂ ಲಿಂಕ್ ಆಗಿರುವ ರಾಜಕೀಯವನ್ನು ಮುಖ್ಯವಾಗಿಟ್ಟುಕೊಂಡು ಕೆಲಸ ಮಾಡಲಿದ್ದೇವೆ.ರಾಜಕೀಯದ ಲಿಂಕ್ ಇಟ್ಕೊಂಡೇ ಕೆಲಸ ಮಾಡಿ ಇಂಪ್ಯಾಕ್ಟ್ ಸಿಗುವಂತೆ ಮಾಡಲಿದ್ದೇವೆ ಎನ್ತಾರೆ ಪುಟ್ಟಪ್ಪ.
ಅದೇನೇ ಆಗಲಿ “ಪೊಲಿಟಿಕಲ್ 360″ಚಾನೆಲ್ 10 ರಲ್ಲಿ ಹನ್ನೊಂದನೇ ಚಾನೆಲ್ ಆಗಿ ಉಳಿಯದೆ ಅಂದುಕೊಂಡಂತೆ ಸುದ್ದಿ ಬಿತ್ತರಿಸುವ-ಸುದ್ದಿಯನ್ನು ನಿರೂಪಿಸುವ ಶೈಲಿಯಲ್ಲಿ ಹೊಸತನವೊಂದನ್ನು ರೂಢಿಸಿಕೊಳ್ಳಲಿ,ಜನರ ನಿರೀಕ್ಷೆಗಳ ಜತೆಗೆ ಅವರ ಆಶೋತ್ತರಕ್ಕೂ ಸ್ಪಂದಿಸುವಂತಾಗಲಿ, ರಾಜಕೀಯವನ್ನೇ ಪ್ರದಾನ ವಿಷಯವನ್ನಾಗಿಟ್ಟುಕೊಂಡು ಚಾನೆಲ್ ರೀ ಲಾಂಚ್ ಆಗುತ್ತಿರುವ ಸಂದರ್ಭದಲ್ಲಿ ಹೊಸ ಟೀಮ್ ಗೆ ಶುಭಾಷಯ ಕೋರುತ್ತೆ ಕನ್ನಡ ಫ್ಲ್ಯಾಶ್ ನ್ಯೂಸ್ ಹಾಗೂ ಗರುಡವಾಯ್ಸ್ ಮತ್ತು ಗರುಡಚರಿತೆ ಬಳಗ.