ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾಗಲು ಸಂಸದ ಸಿದ್ದೇಶ್ವರ್ ಸೇರಿ ರಾಜ್ಯದ ಎಲ್ಲ ಸಂಸದರಿಗೆ ಸಿಎಂ ಸಿದ್ದರಾಮಯ್ಯ ಪತ್ರ

ಬೆಂಗಳೂರು: ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಧೋರಣೆ ವಿರೋಧಿಸಿ ನಾಳೆ ನವದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ಫೆಬ್ರವರಿ 7(ನಾಳೆ) ಪ್ರತಿಭಟನೆಗೆ ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ರಾಜ್ಯದ ಸಂಸದರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗೂ ಪತ್ರ ಬರೆದಿದ್ದು, ನಾಳಿನ ಪ್ರತಿಭಟನೆಯಲ್ಲಿ ಭಾಗಿಯಾಗುವಂತೆ ರಾಜ್ಯದ ಮನವಿ ಮಾಡಿದ್ದಾರೆ.
ಕನ್ನಡಿಗರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ, ನಮ್ಮ ಸ್ವಾಭಿಮಾನಿ ಹೋರಾಟಕ್ಕೆ ಎಲ್ಲರೂ ಬೆಂಬಲ ನೀಡಿ ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಕರ್ನಾಟಕಕ್ಕೆ ತೆರಿಗೆ ಪಾಲಿನ ಹಂಚಿಕೆಯಲ್ಲಿ ಆಗುತ್ತಿರುವ ಭಾರೀ ಅನ್ಯಾಯ, ಬರಪರಿಹಾರ ನೀಡದಿರುವುದು, ವಿವಿಧ ಯೋಜನೆಗಳಿಗೆ ಅನುಮತಿ ಮತ್ತು ನೆರವು ನೀಡುವಲ್ಲಿ ತೋರುತ್ತಿರುವ ನಿರ್ಲಕ್ಷ್ಯ ಮತ್ತು ವಿಳಂಬ ಇತ್ಯಾದಿಗಳು ರಾಜ್ಯದಲ್ಲಿ ಜನಜೀವನವನ್ನು ವಿಪರೀತವಾಗಿ ಬಾಧಿಸುತ್ತಿವೆ. ಈ ವಿಚಾರವನ್ನು ಜವಾಬ್ದಾರಿಯುತ ಚುನಾಯಿತ ಪ್ರತಿನಿಧಿಗಳಾದ ತಾವು ಅರಿತೇ ಇರುತ್ತೀರಿ. ಆದುದರಿಂದ, ಈ ಧರಣಿ ಸತ್ಯಾಗ್ರಹದಲ್ಲಿ ತಾವು ಕೂಡಾ ಪಾಲ್ಗೊಂಡು ಅದರ ಯಶಸ್ಸಿಗೆ ನೆರವಾಗಬೇಕು ಎಂದು ತಮ್ಮಲ್ಲಿ ಕರ್ನಾಟಕದ ಸಮಸ್ತ ಜನತೆಯ ಪರವಾಗಿ ವಿನಂತಿಸುತ್ತೇನೆ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
ಜಿ.ಎಂ. ಸಿದ್ದೇಶ್ವರ್ ಸೇರಿದಂತೆ ಪ್ರಹ್ಲಾದ್ ಜೋಶಿ, ಶಿವಕುಮಾರ್ ಉದಾಸಿ, ಅಣ್ಣಾ ಸಾಹೇಬ ಜೊಲ್ಲೆ, ರಮೇಶ್ ಜಿಗಜಿಣಗಿ, ಬಿ.ಎನ್. ಬಚ್ಚೇಗೌಡ, ನಳಿನ್ ಕುಮಾರ್ ಕಟೀಲ್, ಪ್ರಜ್ವಲ್ ರೇವಣ್ಣ, ಬಿ.ವೈ ರಾಘವೇಂದ್ರ, ಶ್ರೀನಿವಾಸ್ ಪ್ರಸಾದ್, ಡಾ. ಉಮೇಶ್ ಜಾಧವ್, ಎಸ್. ಮುನಿಸ್ವಾಮಿ, ಕರಡಿ ಸಂಗಣ್ಣ, ಸುಮಲತಾ ಅಂಬರೀಷ್, ಪ್ರತಾಪ್ ಸಿಂಹ, ರಾಜಾ ಅಮರೇಶ್ವರ್ ನಾಯಕ್, ಅನಂತ ಕುಮಾರ್ ಹೆಗಡೆ, ಜಿ.ಎಸ್. ಬಸವರಾಜ್, ಎ. ನಾರಾಯಣ ಸ್ವಾಮಿ, ಭಗವಂತ್ ಖೂಬಾ, ಶೋಭಾ ಕರಂದ್ಲಾಜೆ, ಡಿ.ಕೆ. ಸುರೇಶ್, ಡಿ.ವಿ ಸದಾನಂದ ಗೌಡ, ಪಿ.ಸಿ. ಮೋಹನ್, ಪಿ.ಸಿ. ಗದ್ದಿಗೌಡರ್, ತೇಜಸ್ವಿ ಸೂರ್ಯ, ಮಂಗಲಾ ಸುರೇಶ್ ಅಂಗಡಿ, ವೈ ದೇವೇಂದ್ರಪ್ಪ ಅವರಿಗೂ ಪತ್ರ ಬರೆಯಲಾಗಿದೆ.