ಕೊಗ್ಗನೂರು ಬಳಿ 36 ಕೋಟಿ ವೆಚ್ಚದ ಸಿ ಆರ್ ಸಿ ಸೆಂಟರ್ ನಿರ್ಮಿಸಲು ನೀಲನಕ್ಷೆ ತಯಾರು.

ದಾವಣಗೆರೆ: ಕರ್ನಾಟಕ ಮತ್ತು ಗೋವಾ ರಾಜ್ಯದ ವಿಕಲಚೇತನ ಮಕ್ಕಳ ಕೌಶಲ್ಯಾಭಿವೃದ್ಧಿ, ಪುನರ್ವಸತಿ ಮತ್ತು ಸಬಲೀಕರಣಕ್ಕಾಗಿ ತಾಲ್ಲೂಕಿನ ಕೊಗ್ಗನೂರು ಬಳಿ 12 ಎಕರೆ ಪ್ರದೇಶದಲ್ಲಿ ಸುಮಾರು 36 ಕೋಟಿ ರೂ., ವೆಚ್ಚದಲ್ಲಿ ಸಿಆರ್‌ಸಿ ಸೆಂಟರ್ ನಿರ್ಮಿಸಲು ನೀಲನಕ್ಷೆ ತಯಾರಿಸಲಾಗಿದ್ದು, ಶೀಘ್ರದಲ್ಲಿ ಕಟ್ಟಡ ನಿರ್ಮಾಣ ಪೂರ್ಣಗಳಿಸಿ ವಿಕಲಚೇತನ ಮಕ್ಕಳಿಗೆ ವಸತಿ, ತರಬೇತಿ ಹಾಗೂ ಉದ್ಯೋಗ ಒದಗಿಸಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಭರವಸೆ ನೀಡಿದರು.

ಇಲ್ಲಿನ ದೇವರಾಜ್ ಸರಸ್ ಬಡಾವಣೆಯಲ್ಲಿರುವ ವಿಕಲಚೇತನರ ಕೌಶಲ್ಯಾಭಿವೃದ್ಧಿ, ಪುನರ್ವಸತಿ ಮತ್ತು ಸಬಲೀಕರಣದ ಸಂಯುಕ್ತ ಪ್ರಾದೇಶಿಕ ಕೇಂದ್ರ (ಸಿಆರ್‌ಸಿ)ದಲ್ಲಿ ಮಂಗಳವಾರ ನಡೆದ ಅಡಿಪ್ ಯೋಜನೆಯಲ್ಲಿ ಅಂಗವಿಕಲರಿಗೆ ಟಿ.ಎಲ್.ಎಮ್ ಕಿಟ್ ವಿತರಿಸಿ ಮಾತನಾಡಿದರು.

ಕೇಂದ್ರ ಸರ್ಕಾರದಿಂದ ಅನುಮೋದನೆಗೊಂಡು ಕರ್ನಾಟಕ ಮತ್ತು ಗೋವಾ ರಾಜ್ಯಗಳಿಗೆ ಸೇರಿ ನಮ್ಮ ಜಿಲ್ಲೆಯಲ್ಲಿ ಸಿ.ಆರ್.ಸಿ ಸೆಂಟರ್ ಸ್ಥಾಪನೆ ಮಾಡಲಾಗಿದೆ. ತಾಲ್ಲೂಕಿನ ಕೊಗ್ಗನೂರು ಬಳಿ 12 ಎಕರೆ ಪ್ರದೇಶದಲ್ಲಿ ಸುಮಾರು 36 ಕೋಟಿ ವೆಚ್ಚದಲ್ಲಿ ಸಿ.ಆರ್.ಸಿ ಸೆಂಟರ್ ನಿರ್ಮಿಸಲು ನೀಲನಕ್ಷೆ ತಯಾರಿಸಲಾಗಿದೆ. ಈ ಕೇಂದ್ರದಲ್ಲಿ ಏಕಕಾಲದಲ್ಲಿ 500-600 ಜನರಿಗೆ ತರಬೇತಿ ನಿಡಬಹುದಾಗಿದೆ ಎಂದು ವಿವರಿಸಿದರು.

ಶೀಘ್ರದಲ್ಲಿ ಈ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು, ಇಲ್ಲಿ ವಿಕಲಚೇತನ ಮಕ್ಕಳಿಗೆ ವಸತಿ, ತರಬೇತಿ ಹಾಗೂ ಉದ್ಯೋಗ ಒದಗಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ಕರ್ನಾಟಕ ಮತ್ತು ಗೋವಾ ರಾಜ್ಯದ ಜನತೆ ಸಿ.ಆರ್.ಸಿ ಸೆಂಟರ್ ನ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ವಿಕಲಚೇತನ ಮಕ್ಕಳ ಪೋಷಕರಿಗೆ ವೀಲ್‌ಚೇರ್ ಮತ್ತು ಕಲಿಕಾ ಕಿಟ್ ಬಳಕೆಯ ಬಗ್ಗೆ 15 ದಿನಗಳ ತರಬೇತಿ ನೀಡಲಾಗಿದ್ದು, ಇಂದು ವಿಕಲಚೇತನ ಮಕ್ಕಳಿಗೆ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ 11 ವಿಕಲಚೇತನ ಮಕ್ಕಳ ಪೋಷಕರಿಗೆ ತರಬೇತಿಯ ಪ್ರಮಾಣಪತ್ರ ನೀಡಿ ಕಿಟ್ ಹಾಗೂ 4 ವೀಲ್‌ಚೇರ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ದೂಡ ಅಧ್ಯಕ್ಷ ದೇವರಮನಿ ಶಿವಕುಮಾರ. ದೂಡ ಸಮಿತಿ ಸದಸ್ಯರಾದ ಗೌರಮ್ಮ ಪಾಟೀಲ್. ಮಾರುತಿ ರಾವ್. ಡಾ. ಶರೀಫ್. ಡಾ.ಥಾಮಸ್ ಸಲ್ಪನ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!