ಕೊನೆಗೂ ಚಿರತೆ ಸಿಕ್ಕೆ ಬಿಟ್ಟಿತು.! ದೊಡ್ಡ ಬೊನಿಗೆ ಬಿದ್ದ ಚಿರತೆ ಎಲ್ಲಿ ಗೊತ್ತಾ.?
ದಾವಣಗೆರೆ: ಇತ್ತೀಚೆಗೆ ಕುಂದುವಾಡ ಕೆರೆ ಸುತ್ತಮುತ್ತ ಚಿರತೆ ಕಾಣಿಸಿಕೊಂಡಿದೆ ಎನ್ನಲಾದ ವೀಡಿಯೋ ಫುಲ್ ವೈರಲ್ ಆಗಿ ದಾವಣಗೆರೆ ಜನರ ನಿದ್ದೆಗೆಡಿಸಿತ್ತು.
ಅದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಕಾಣಿಸಿಕೊಂಡಿರುವುದು ಸುಳ್ಳು ಎಂದು ಸ್ಪಷ್ಟನೆಯನ್ನೂ ನೀಡಿದ್ದರು.
ಈಗ ಚಿರತೆ ಕಾಣಿಸಿಕೊಂಡಿದ್ದು ಎಲ್ಲಿ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅಲ್ಲದೇ ಆ ಚಿರತೆಯನ್ನು ಬೋನಿಗೆ ಬೀಳಿಸಲಾಗಿದೆ. ಚನ್ನಗಿರಿ ತಾಲ್ಲೂಕಿನ ಯಲೋದನಹಳ್ಳಿ- ದಾಗಿನಕಟ್ಟೆ ಬಳಿಯ ಪಂಪ್‌ಹೌಸ್ ಹತ್ತಿರ ರಾತ್ರೋರಾತ್ರಿ ಚಿರತೆ ಕಾಣಿಸಿಕೊಂಡಿತ್ತು.
ಕಳೆದ ನಾಲ್ಕೈದು ದಿನಗಳಿಂದಲೂ ಸುತ್ತಮುತ್ತಲ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು. ಚಿರತೆ ಇರುವ ವಿಚಾರ ತಿಳಿದ ಅರಣ್ಯಾಧಿಕಾರಿಗಳು ಅದನ್ನು ಸೆರೆ ಹಿಡಿಯಲು ಸಾಕಷ್ಟು ಪ್ರಯತ್ನ ಮಾಡಿದರು. ಅರಣ್ಯ ಇಲಾಖೆಯಿಂದ ಎರಡು ದಿನಗಳ ಕಾಲ ರಾತ್ರಿಯೆಲ್ಲಾ ಸೀಟಿ ಊದುತ್ತಾ, ಸದ್ದು ಮಾಡಿದರೂ ದಟ್ಟ ಪೊದೆಗಳು, ತೋಟಗಳು, ಹೊಲಗಳಲ್ಲಿ ಸುತ್ತಾಡಿಕೊಂಡಿದ್ದ ಚಿರತೆ ಮಾತ್ರ ಹೊರಗೆ ಬಂದಿರಲಿಲ್ಲ.
ಅಂತಿಮವಾಗಿ ಅರಣ್ಯ ಇಲಾಖೆ ದೊಡ್ಡ ಬೋನ್ ತರಿಸಿ, ಅದರಲ್ಲೊಂದು ನಾಯಿಯನ್ನು ಕೂಡಿಟ್ಟರು. ಹಸಿದ ಚಿರತೆ ಭಾನುವಾರ ತಡರಾತ್ರಿ ಶ್ವಾನದ ಬೇಟೆಗೆ ಬಂದು ಅರಣ್ಯ ಇಲಾಖೆ ಬೋನಿಗೆ ಸಿಕ್ಕಿ ಬಿದ್ದಿದ್ದು, ಗ್ರಾಮಸ್ಥರು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ.