Labour card: ನಕಲಿ ಸಂಘಟಕರಿಂದ ದೇಣಿಗೆ ಸಂಗ್ರಹ, ಬೋಗಸ್ ಕಾರ್ಡುಗಳ ಹಂಚಿಕೆ

umesh and lakshman

ದಾವಣಗೆರೆ: ನಗರದಲ್ಲಿ ಮತ್ತು ಜಿಲ್ಲೆಯಾದ್ಯಂತ ಹಲವಾರು ಸಂಘಟನೆಗಳು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಸೌಲಭ್ಯಗಳನ್ನು ಕೊಡಿಸುತ್ತೇವೆ ಎಂದು ಆಸೆ, ಆಮಿಷಗಳನ್ನು ತೋರಿಸಿ ನೈಜ ಕಟ್ಟಡ ಕಾರ್ಮಿಕರು ಅಲ್ಲದವರಿಗೂ ಕಟ್ಟಡ ನಿರ್ಮಾಣ ಕಾರ್ಮಿಕರ ಗುರುತಿನ ಕಾರ್ಡನ್ನು ಮಾಡಿಕೊಡುತ್ತಿರುವುದಲ್ಲದೇ, ಕಟ್ಟಡ ನಿರ್ಮಾಣ ಕಾಮಗಾರಿಗೆ ಬೇಕಾಗುವ ಸಾಮಾಗ್ರಿಗಳ ಮಾರಾಟ ಮಳಿಗೆಗಳಿಗೆ ತೆರಳಿ ವಂತಿಗೆ ವಸೂಲಿ ಮಾಡುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಎಐಟಿಯಸಿ ನೇತೃತ್ವದ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡಯವ ಕ್ವಾರಿ ಕಾರ್ಮಿಕರ ಸಂಘದ ರಾಜ್ಯ ಸಮಿತಿ ಹಾಗೂ ದಾವಣಗೆರೆ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ನಕಲೀ ಕಟ್ಟಡ ಕಾರ್ಮಿಕರ ಕಾರ್ಡುಗಳನ್ನು ಮಾಡಿಸುವ ಮೂಲಕ ಕಟ್ಟಡ ಕಾರ್ಮಿಕರಲ್ಲದವರಿಗೂ ಸರ್ಕಾರಿ ಸವಲತ್ತುಗಳನ್ನು ನೀಡುವ ಯತ್ನ ಮಾಡುತ್ತಿದ್ದಾರೆ. ಇದಲ್ಲದೇ ಕಾರ್ಮಿಕರ ಗುರುತಿನ ಕಾರ್ಡನ್ನು ಮಾಡಿ ಕೊಡುವುದರ ಜೊತೆಗೆ ಒಂದು ಕಾರ್ಡ್‌ಗೆ ೫೦೦ ರೂ.ಗಳಿಂದ ರೂ.೧೦೦೦ವರೆಗೂ ಅಮಾಯಕ ಜನರಿಂದ ವಸೂಲಿ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ನಮ್ಮ ಸಂಘಟನೆಯ ಗಮನಕ್ಕೆ ಬಂದಿದೆ ಎಂದಿದ್ದಾರೆ.

ಈ ಮೂಲಕ ಕಟ್ಟಡ ಕಾರ್ಮಿಕರಾಗಲೀ, ದಾವಣಗೆರೆ ಜಿಲ್ಲಾಯ ನಾಗರೀಕರಾಗಲೀ ಬೋಗಸ್ ಕಾರ್ಡುಗಳನ್ನು ಮಾಡಿಕೊಡುವ ಸಂಘಟನೆಗಳಿಗೆ ಯಾವುದೇ ಹೆಚ್ಚಿನ ಹಣ ನೀಡದೇ ನಮ್ಮ ಸಂಘಟನೆಯ ಕಚೇರಿಗೆ ದಾಖಲೆಗಳನ್ನು ನೀಡುವ ಮೂಲಕ ಕಾರ್ಮಿಕ ಇಲಾಖೆಯಿಂದ ನೀಡಲಾಗುವ ಗುರುತಿನ ಚೀಟಿಗಳನ್ನು ಪಡೆಯುವಂತೆ ಮನವಿ ಮಾಡಿದ್ದಾರೆ.

ನಮ್ಮ ಸಂಘಟನೆಯ ಮುಖ್ಯ ಕಚೇರಿ ಕಾಮ್ರೇಡ್ ಪಂಪಾಪತಿ ಭವನ, ಅಶೋಕ ರಸ್ತೆ, ದಾವಣಗೆರೆ, ಇಲ್ಲಿ ಇದ್ದು, ಚನ್ನಗಿರಿಯ ಸಂತೆ ಮೈದಾನದ ಸಿಡಿಪಿಓ ಆಫೀಸ್ ಪಕ್ಕದಲ್ಲಿ ಇರುತ್ತದೆ. ಹರಿಹರ ಸಮೀಪದ ಹಂಸಾಗರ ಬಡಾವಣೆಯ ಆವರಣದಲ್ಲಿ ನಮ್ಮ ಕಚೇರಿ ಇದ್ದು, ನಮ್ಮ ಅಧೀನದಲ್ಲೇ ಕಾರ್ಯ ನಿರ್ವಹಿಸುತ್ತಿರುತ್ತದೆ. ಇದಲ್ಲದೇ ಹೊನ್ನಳ್ಳಿಯ ಸಂತೆ ಮೈದಾನದ ಹತ್ತಿರ ಇರುವ ಕಟ್ಟಡ ಕಾಮಿಕರ ಕಚೇರಿಯನ್ನು ಹೊರತುಪಡಿಸಿದರೆ ಇನ್ನಾವುದೇ ನಮ್ಮ ಸಂಘಟನೆಯ ಕಚೇರಿಗಳು ದಾವಣಗೆರೆ ಜಿಲ್ಲೆಯಲ್ಲಿ ಇರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಆದರೆ ಕೆಲವು ಸಂಘಟನೆಯವರು ನಮ್ಮ ಸಂಘಟನೆಯ ಹೆಸರು ಹೇಳಿಕೊಂಡು ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗೆ ಬಳಕೆಯಾಗುವ ಅಂಗಡಿಗಳಿಗೆ ತೆರಳಿ ಪ್ರತಿ ಅಂಗಡಿಯಿಂದ ಇಂತಿಷ್ಟು ದೇಣಿಗೆ ನೀಡುವಂತೆ ಒತ್ತಾಯ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಕಾರಣ ಜಿಲ್ಲೆಯ ಕಟ್ಟಡ ಮತ್ತು ಇತರೆ ನಿರ್ಮಾಣ ಹಾಗೂ ಬಣ್ಣದ ಅಂಗಡಿಗಳಿಗೆ ತಿಳಿಸುವುದೇನೆಂದರೆ ನಮ್ಮ ಕಟ್ಟಡ ಕಟ್ಟುವ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಟನೆಯಿಂದ ಯಾರ ಬಳಿಯೂ ಸಹಾಯಾರ್ಥ ಹಣವಾಗಲೀ, ದೇಣಿಗೆಯಾಗಲೀ ಕೇಳಿರುವುದಿಲ್ಲ. ಕೇಳುವುದೂ ಇಲ್ಲ ಎಂದು ಅಂಗಡಿ ಮಾಲೀಕರ ಗಮನಕ್ಕೆ ತಂದಿದ್ದಾರೆ.

ಕಾರಣ ಯಾವುದೇ ಕಟ್ಟಡ ಕಾರ್ಮಿಕರ ಸಂಘಟನೆಯ ಹೆಸರನ್ನು ಹೇಳಿಕೊಂಡು ಬಂದು ದೇಣಿಗೆ ಸಂಗ್ರಹ ಮಾಡಲು ಬಂದರೆ ನಮ್ಮ ಸಂಘಟನೆಯ ಪದಾಧಿಕಾರಿಗಳಿಗೆ ತಿಳಿಸಬೇಕು. ಇಲ್ಲವೇ ನಮ್ಮ ಸಂಘದ ಕಚೇರಿಗೆ ಲಿಖಿತವಾಗಿ ತಿಳಿಸಿದರೆ, ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದು ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ತಿಳಿಸುತ್ತೇವೆ ಎಂದು  ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ರಾಜಾಧ್ಯಕ್ಷ ಆವರಗೆರೆ ಹೆಚ್.ಜಿ.ಉಮೇಶ್, ದಾವಣಗೆರೆ ಜಿಲ್ಲಾಧ್ಯಕ್ಷ ವಿ.ಲಕ್ಷ್ಮಣ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!