ಜಾತಿ ಗಣತಿ ಬೇಕಿದ್ದರೇ ಸಿದ್ದರಾಮಯ್ಯ ಮಾಡಲಿ; ಈ ಕುರಿತು ವೀರಶೈವ ಮಹಾ ಅಧಿವೇಶನದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು – ಶಾಮನೂರು ಶಿವಶಂಕರಪ್ಪ
ದಾವಣಗೆರೆ: ಸರ್ವ ವೀರಶೈವ ಲಿಂಗಾಯತರು ಕೇಂದ್ರದ ಓಬಿಸಿ ಪಟ್ಟಿಗೆ ಸೇರಬೇಕು. ಜೊತೆಗೆ ಜಾತಿ ಗಣತಿ ಬಗ್ಗೆ ವೀರಶೈವ ಮಹಾ ಅಧಿವೇಶನದಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದು ವೀರಶೈವ ಮಹಾ ಸಭೆ ಅಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರ ಶಿವಶಂಕರಪ್ಪ ಹೇಳಿದ್ದಾರೆ. ನಗದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ಬೇಕಿದ್ದರೇ ಸಿಎಂ ಸಿದ್ದರಾಮಯ್ಯ ಮಾಡಲಿ ನಮ್ಮದೇನು ಬೇಸರವಿಲ್ಲ. ಈ ಬಗ್ಗೆ ವೀರ ಶೈವ ಮಹಾ ಅಧಿವೇಶನದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.
ಇದೇ 23 ಮತ್ತು 24 ರಂದು ದಾವಣಗೆರೆ ನಗರದ ಎಂಬಿಎ ಕಾಲೇಜು ಮೈದಾನದಲ್ಲಿ 24ನೇ ಅಖಿಲ ಭಾರತ ವೀರ ಶೈವ ಮಹಾ ಸಭೆಯ ಮಹಾ ಅಧಿವೇಶನ ನಡೆಯಲಿದೆ. ಕನಿಷ್ಟ 3 ರಿಂದ 4 ಲಕ್ಷ ಜನ ಸೇರುತ್ತಾರೆ. ವೀರಶೈವ ಪರಂಪರೆಯ ಎಲ್ಲ ಸ್ವಾಮೀಜಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಮಹಾ ಅಧಿವೇಶನದ ಬಗ್ಗೆ ಜನರಿಗೆ ಮಾಹಿತಿ ನೀಡಲು ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಲಿದ್ದಾರೆ ಎಂದು ತಿಳಿಸಿದ್ದಾರೆ.
ಮುರಘಾ ಶ್ರೀ ವಿಚಾರವಾಗಿ ಮಾತನಾಡಿದ ಅವರು, ಚಿತ್ರದುರ್ಗದ ಮುರಘಾಶ್ರೀ ಅವರು ಆರೋಪ ಮುಕ್ತರಾಗಿ ಹೊರಬರಲಿ. ಆಮೇಲೆ ವೀರಶೈವ ಮಹಾ ಅಧಿವೇಶಕ್ಕೆ ಕೆರಯುವ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಕಳೆದ ವರ್ಷ ಕೊರೊನಾ ಹಾಗೂ ಚುನಾವಣೆ ಹಿನ್ನೆಲೆ ಅಖಿಲ ಭಾರತ ವೀರ ಶೈವ ಮಹಾ ಸಭೆಯ ಮಹಾ ಅಧಿವೇಶನವನ್ನು ಮುಂದೂಡಲಾಗಿತ್ತು. ಪ್ರತಿ 5 ವರ್ಷಕ್ಕೊಮ್ಮೆ ಮಹಾಸಭೆಯ ಮಹಾ ಅಧಿವೇಶನ ನಡೆಯುತ್ತದೆ. ರೈತರು, ಮಹಿಳಾ ಗೋಷ್ಠಿ ಹಾಗೂ ವೀರಶೈವ ಪರಂಪರೆಯ ಬಗ್ಗೆ ಚರ್ಚೆ ಮಾಡಲಾಗುವುದು.
ಜಾತಿ ಜನಗಣತಿ ವರದಿ ಬಿಡುಗಡೆ ಬಗ್ಗೆ ಇತ್ತೀಚೆಗೆ ಶಾಮನೂರು ಶಿವಶಂಕರಪ್ಪ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸರ್ಕಾರದ ಬಳಿ ಹಳೇ ವರದಿ ಇದೆ, ಹೊಸದಾಗಿ ಮಾಡಲು ಹೇಳಿದ್ದೇನೆ ಎಂದಿದ್ದರು.
ನಮ್ಮ ಸಮುದಾಯದ ಮನೆ ಮನೆಗಳಿಗೆ ಹೋಗಿ ಸಮೀಕ್ಷೆ ನಡೆಸಿಲ್ಲ. ಮನೆಯಲ್ಲೇ ಕುಳಿತು ವರದಿ ಸಿದ್ಧಪಡಿಸಲಾಗಿದೆ. ಜನಗಣತಿಯ ಅಂಕಿ ಅಂಶಗಳಲ್ಲಿ ಸಾಕಷ್ಟು ಲೋಪದೋಷಗಳಿವೆ. ಮತ್ತೊಮ್ಮೆ ವೈಜ್ಞಾನಿಕವಾಗಿ ಜಾತಿ ಗಣತಿ ಮಾಡಬೇಕು ಎಂದು ಹೇಳಿದ್ದರು.