ಅಗತ್ಯ ಸೇವೆಗಳಡಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು-ಸಿಬ್ಬಂದಿಗಳ ಪಟ್ಟಿಮಾಡಿ -ತಾಲ್ಲೂಕು ತಹಶೀಲ್ದಾರ್ ಎಂ.ಬಿ ಅಶ್ವಥ್
ದಾವಣಗೆರೆ : ಅಂಚೆ ಮತಪತ್ರದ ಮೂಲಕ ತಮ್ಮ ಹಕ್ಕು ಚಲಾಯಿಸಬಹುದಾದ ಅರ್ಹ ವ್ಯಕ್ತಿಗಳನ್ನು ಗುರುತಿಸಿ ಪಟ್ಟಿಮಾಡಿ ಚುನಾವಣಾಧಿಕಾರಿಗಳಿಗೆ ನೀಡಬೇಕು ಎಂದು ತಾಲ್ಲೂಕು ತಹಶೀಲ್ದಾರ್ ಹಾಗೂ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಎಂ.ಬಿ ಅಶ್ವಥ್ ಹೇಳಿದರು.
ಬುಧವಾರ ನಗರದ ತಾಲ್ಲೂಕು ಕಚೇರಿಯಲ್ಲಿ ಅಂಚೆ ಮತದಾನದ ಪೂರ್ವಸಿದ್ಧತೆ ಕುರಿತಂತೆ ಸಭೆ ನಡೆಸಿದ ಅವರು, ಮೇ 10 ರಂದು ನಡೆಯುವ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ಗೆ ಸಂಬಂಧಿಸಿದಂತೆ ಅಗತ್ಯ ಸೇವೆಗಳಡಿ ಕಾರ್ಯ ನಿರ್ವಹಿಸುತ್ತಿರುವ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಚುನಾವಣೆ ದಿನಾಂಕದಂದು ಅವರುಗಳ ಮತಗಟ್ಟೆಗಳಲ್ಲಿ ಮತದಾನ ಮಾಡಲು ಸಾಧ್ಯವಾಗದೇ ಇರುವುದರಿಂದ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಭಾರತ ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ ಎಂದರು.
ವಿದ್ಯುತ್, ಬಿಎಸ್.ಎನ್.ಎಲ್, ರೈಲ್ವೆ, ದೂರದರ್ಶನ, ಆರೋಗ್ಯ, ಕೆ.ಎಸ್.ಆರ್.ಟಿ.ಸಿ, ಟ್ರಾಫಿಕ್ ಪೋಲೀಸ್ ಸೇರಿದಂತೆ 12 ವಿವಿಧ ಇಲಾಖೆಗಳನ್ನು ಪಟ್ಟಿ ಮಾಡಿ ಈ ಇಲಾಖೆಗಳ ವ್ಯಾಪ್ತಿಯಲ್ಲಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡುವುದರೊಂದಿಗೆ 108-ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಅರ್ಹ ವ್ಯಕ್ತಿಗಳ ಅಗತ್ಯ ಮಾಹಿತಿಯನ್ನು ಸಂಗ್ರಹಿಸಿ ಕಚೇರಿಗೆ ನೀಡಬೇಕು ಎಂದರು.
ಅಂಚೆ ಮತಪತ್ರದ ಮುಖಾಂತರ ಮತದಾನ ಮಾಡಲು ಇಚ್ಚಿಸುವ ಗೈರು ಹಾಜರಿ ಮತದಾರರು ತಮ್ಮ ವಿವರ ಹಾಗೂ ಮತದಾನದ ದಿನದಂದು ಅಗತ್ಯ ಸೇವೆಯಲ್ಲಿರುವುದರ ಕುರಿತು ಎಲ್ಲಾ ವಿವರಗಳನ್ನು ಒದಗಿಸಿ ನಮೂನೆ-12ಡಿ ಯಲ್ಲಿ ರಿಟರ್ನಿಂಗ್ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು. ಈ ಅರ್ಜಿಯನ್ನು ಸಂಬಂಧಪಟ್ಟ ಸಂಸ್ಥೆಯು ನೇಮಕ ಮಾಡಿದ ನೋಡಲ್ ಅಧಿಕಾರಿಯು ಪರಿಶೀಲಿಸಬೇಕು ಹಾಗೂ ಅಂಚೆ ಮತಪತ್ರ ಸೌಲಭ್ಯವನ್ನು ಕೋರುವಂತ ಅರ್ಜಿಯು ಚುನಾವಣೆಯ ಘೋಷಣೆಯಾದ ದಿನಾಂಕದಿಂದ ಸಂಬಂಧಪಟ್ಟ ಚುನಾವಣೆಯ ಅಧಿಸೂಚನೆಯ ದಿನಾಂಕದ ನಂತರದ 5 ದಿನಗಳವರೆಗೆ ಅವಧಿಯಲ್ಲಿ ಚುನಾವಣಾಧಿಕಾರಿ(ಆರ್‍ಓ) ಗೆ ತಲುಪಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಕೆ.ಎಸ್.ಆರ್.ಟಿ.ಸಿ ಡಿಪೋ ವ್ಯವಸ್ಥಾಪಕರು ಹಾಗೂ ನಗರ ಪೊಲೀಸ್ ಅಧೀಕ್ಷಕರು ಉಪಸ್ಥಿತಿರಿದ್ದರು