ಲಾಕ್ ಡೌನ್ ಹಿನ್ನೆಲೆ 2 ತಿಂಗಳಿಂದ ಲಾಕ್ ಆಗಿದ್ದ ಬಸ್ ಜೂನ್ 21 ರಿಂದ ಅನ್ ಲಾಕ್
ದಾವಣಗೆರೆ: ಲಾಕ್ಡೌನ್ ಹಿನ್ನೆಲೆಯಲ್ಲಿ ಕಳೆದ ಸುಮಾರು ಎರಡು ತಿಂಗಳಿಂದ ಡಿಪೋದಲ್ಲಿ ಲಾಕ್ ಆಗಿದ್ದ ಬಸ್ ಗಳು, ಲಾಕ್ಡೌನ್ ಸಡಿಲಿಕೆ ಮಾಡಿ ಸರ್ಕಾರ ಆದೇಶಿಸಿದ ಹಿನ್ನೆಲೆಯಲ್ಲಿ ಇಂದು ಧೂಳು ಕೊಡವಿಕೊಂಡು ಸಂಚಾರಕ್ಕೆ ಸಿದ್ದವಾಗಿ ನಿಂತಿವೆ!
ಹೌದು! ಸರ್ಕಾರ ಲಾಕ್ಡೌನ್ ಸಡಿಲಿಕೆ ಮಾಡಿ, ಸೋಂಕು ಪ್ರಕರಣಗಳು ಹೆಚ್ಚಿರುವ ಮೈಸೂರು ಹೊರತು ಪಡಿಸಿ, ರಾಜ್ಯದ್ಯಂತ ಕೆಎಸ್ಆರ್ ಟಿಸಿ ಮತ್ತು ಖಾಸಗಿ ಬಸ್ ಗಳ ಸಂಚಾರಕ್ಕೆ ಅನುಮತಿಸಿದ ಹಿನ್ನೆಲೆಯಲ್ಲಿ ಇಂದು ಸಂಜೆ ದಾವಣಗೆರೆ ಕೆಎಸ್ಆರ್ ಟಿಸಿ ಬಸ್ ಗಳನ್ನು ಸ್ಯಾನಿಟೈಸ್ ಮಾಡಿ, ನಾಳೆ ಜೂ. 21 ರ ಸೋಮವಾರದಿಂದ ಸಂಚಾರಕ್ಕೆ ಸಿದ್ದತೆಗೊಳಿಸಲಾಯಿತು.
ದಾವಣಗೆರೆ ನಗರಸಾರಿಗೆ ಮತ್ತು ಜಿಲ್ಲೆಯಾದ್ಯಂತ ಹಾಗೂ ಅನ್ಯ ಜಿಲ್ಲೆಗಳಿಗೆ ಬಸ್ ಸಂಚಾರಕ್ಕೆ ಪ್ರಯಾಣಿಕರ ಅಗತ್ಯಕ್ಕೆ ಅನುಸಾರವಾಗಿ ಬಸ್ ಗಳನ್ನು ಬಿಡಲಾಗುತ್ತದೆ ಎಂದು ಕೆಎಸ್ಆರ್ಟಿಸಿ ಡಿಪೋ ವ್ಯವಸ್ಥಾಪಕ ರಾಮಚಂದ್ರ ಹೇಳಿದರು.
ಪ್ರಯಾಣಿಕರ ಮತ್ತು ಇತರ ಸಿಬ್ಬಂದಿ ವರ್ಗದವರ ಸುರಕ್ಷತೆಗಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡವರ ಮತ್ತು ಎರಡು ಡೋಸ್ ಲಸಿಕೆ ಪಡೆದ ಸಿಬ್ಬಂದಿಗಳಿಗೆ ಕಾರ್ಯ ನಿರ್ವಹಿಸಲು ಮೊದಲ ಆದ್ಯತೆ ನೀಡುತ್ತೇವೆ.
-ರಾಮಚಂದ್ರ
ಕೆ ಎಸ್ ಆರ್ ಟಿ ಸಿ ಡಿಪೋ ವ್ಯವಸ್ಥಾಪಕರು