ಮಾಯಕೊಂಡ ಬೆಳೆಹಾನಿ, ಸೇತುವೆ ದುರಸ್ತಿ ವೀಕ್ಷಿಸಿದ ಶಾಸಕ
ಹಿರೇಕೋಗಲೂರು : ಮಾಯಕೊಂಡ ಕ್ಷೇತ್ರದ ಚಿಕ್ಕತೊಗಲೇರಿ ಸೇರಿ ನಲ್ಕುದುರೆ, ಬಸವೇಶ್ವರನಗರ, ನವಿಲೆಹಾಳು, ದೊಡ್ಡಘಟ್ಟ, ಚಿರಡೋಣಿ, ಬೆಳಲಗೆರೆ ಸೇರಿ ನಾನಾ ಗ್ರಾಮಗಳಲ್ಲಿ ಹಾನಿಯಾದ ಭತ್ತ ಬೆಳೆಯನ್ನು ಮಾಯಕೊಂಡ ಶಾಸಕ ಬಸವಂತಪ್ಪ ಪರಿಶೀಲನೆ ನಡೆಸಿದರು. ಮಾಯಕೊಂಡ ವಿಧಾನ ಸಭಾ ಕ್ಷೇತ್ರದ ತಾಲೂಕಿನ ನವಿಲೇಹಾಳು ಗ್ರಾಮದ ಗ್ರಾಪಂ ಕಚೇರಿಯಲ್ಲಿ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಆಯೋಜಿಸಿದ್ದ ಸನ್ಮಾನ ಸ್ವೀಕರಿಸಿ ರೈತರ ಅಹವಾಲು ಆಲಿಸಿ ಮಾತನಾಡಿದರು.
“ಯಾವುದೇ ಕಾರಣಕ್ಕೂ ರೈತರು ಧೃತಿಗೇಡಬೇಡಿ, ನಿಮ್ಮಗಳ ನೆರವಿಗೆ ನಿಮ್ಮ ಬಸವಂತಪ್ಪ ಸದಾ ಸಿದ್ಧನಿರುತ್ತಾನೆ. ನವಿಲೇಹಾಳು ಗ್ರಾಮಸ್ಥರು ನನಗೆ ಅತ್ಯಧಿಕ ಮತಗಳನ್ನು ನೀಡಿ ಶಾಸಕನನ್ನಾಗಿ ಆಯ್ಕೆ ಮಾಡಲು ಸಹಕರಿಸಿದ್ದಾರೆ. ನಿಮ್ಮಗಳ ಪ್ರೀತಿಗೆ ಅಬಾರಿಯಾಗಿರುವೆ, ನಿಮ್ಮಗಳ ಯಾವುದೇ ಸಮಸ್ಯೆಗಳಿರಲಿ ಶಾಸಕನಾಗಿ ಸೇವಕನಾಗಿ ಇತ್ಯರ್ಥ ಪಡಿಸುತ್ತೇನೆ,” ಎಂದರು.
ಗ್ರಾಪಂ ಕಚೇರಿಯಲ್ಲಿ ಸನ್ಮಾನ ಸ್ವೀಕರಿಸಿದ ನಂತರ ಹಾನಿಗೊಳಗಾದ ಭತ್ತದ ಬೆಳೆಗಳ ಜಮೀನುಗಳಿಗೆ ಅಧಿಕಾರಿಗಳು ಹಾಗೂ ರೈತರೊಂದಿಗೆ ಶಾಸಕರು ತೆರಳಿ ಬೆಳೆ ಹಾನಿ ವೀಕ್ಷಿಸಿದರು. ಸ್ಥಳದಲ್ಲಿದ್ದ ಕೃಷಿ ಅಧಿಕಾರಿ ಹಾಗೂ ಕಂದಾಯಾಧಿಕಾರಿಗಳಿಗೆ ಹಾನಿಗೊಳಗಾದ ರೈತರಿಂದ ಅರ್ಜಿ ಪಡೆದು, ಪರಿಹಾರಕ್ಕಾಗಿ ವರದಿ ಸಲ್ಲಿಸಲು ಸೂಚಿಸಿದರು.
ಪಿಕಪ್ ಸೇತುವೆ ವೀಕ್ಷಣೆ: ದುರಸ್ತಿಗೊಂಡಿರುವ ನವಿಲೇಹಾಳು ಗಿರಿಯಾಪುರ ರಸ್ತೆಯಲ್ಲಿನ ಪಿಕಪ್ ಸೇತುವೆ ಹಾಗೂ ಈಶ್ವರ ದೇವಸ್ಥಾನದಿಂದ ಪುಟೆನರಿ ಜಮೀನುಗಳಿಗೆ ಹೋಗುವ ರಸ್ತೆಯ ಸೇತುವೆಗಳು ದುಸ್ಥಿತಿ ತಲುಪಿವೆ. ಇದರಿಂದಾಗಿ ಜಮೀನು, ತೋಟಗಳಿಗೂ ಹೋಗಲಾಗುವುದಿಲ್ಲ.ಸುತ್ತುವರಿದು ಜಮೀನುಗಳಿಗೆ ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ತಿಳಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕ ಬಸವಂತಪ್ಪ, ಸಂಬಂಧಪಟ್ಟ ಅಧಿಕಾರಿಗಳಿಗೆ ದುಸ್ಥಿತಿಯಲ್ಲಿರುವ ಸೇತುವೆಗಳನ್ನು ಹೊಸದಾಗಿ ನಿರ್ಮಿಸಲು ಕ್ರಿಯಾಯೋಜನೆ ಸಿದ್ಧ ಪಡಿಸಿ ಕೊಡುವಂತೆ ಸೂಚನೆ ನೀಡಿದರು.
ಇತ್ತೀಚಿಗೆ ಸುರಿದ ಆಲಿಕಲ್ಲು ಮಳೆಯಿಂದಾಗಿ ಮಾಯಕೊಂಡ ಕ್ಷೇತ್ರದ ಚಿಕ್ಕತೊಗಲೇರಿ ಸೇರಿ ನಲ್ಕುದುರೆ, ಬಸವೇಶ್ವರನಗರ, ನವಿಲೆಹಾಳು, ದೊಡ್ಡಘಟ್ಟ, ಚಿರಡೋಣಿ, ಬೆಳಲಗೆರೆ ಸೇರಿ ನಾನಾ ಗ್ರಾಮಗಳಲ್ಲಿ ಹಾನಿಯಾದ ಭತ್ತ ಬೆಳೆ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿತ್ತು. ಅದರಂತೆ ಕಂದಾಯಾಧಿಕಾರಿಗಳು ಹಾನಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮ ಲೆಕ್ಕಾಧಿಕಾರಿಗಳಿಗೆ ಅರ್ಜಿ ನೀಡದೇ ಇರುವ ರೈತರು ಕೂಡಲೇ ಅರ್ಜಿ ನೀಡಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಗ್ರಾಪಂ ಅಧ್ಯಕ್ಷೆ ಶಬ್ನಮ್, ಉಪಾಧ್ಯಕ್ಷ ಎ.ಕೆ. ಹನುಮಂತಪ್ಪ, ಸದಸ್ಯರಾದ ಹಜರತ್ ಅಲಿ, ಡಿ.ಜಿ. ಶಿವರಾಜ್, ಎಸ್.ಎನ್. ದೇವರಾಜ್, ಹುಮಾಯನ್, ಮುಖಂಡರಾದ ಎಂ.ಜಿ. ಶಶಿಕಲಾಮೂರ್ತಿ, ದಾದಾ ಕಲಂದರ್ , ರವಿಕುಮಾರ್, ದಾದಾಪೀರ್, ಜಿ.ಬಿ. ಹಾಲೇಶ್ ಇತರರಿದ್ದರು.