ದಾವಣಗೆರೆ: ಜಿಲ್ಲಾದ್ಯಂತ ಬುಧವಾರ ಸರಕಾರಿ ಶಾಲೆಗಳು ಆರಂಭಗೊಂಡವು. ಶಾಲಾ ಆರಂಭದ ಮೊದಲ ದಿನ ಚಿಣ್ಣರಿಗೆ ಗುಲಾಬಿ ಹೂವು ನೀಡಿ, ಆರತಿ ಬೆಳಗಿ ಸಿಹಿ ನೀಡಿ ಸ್ವಾಗತಿಸಲಾಯಿತು. ಜಿಲ್ಲೆಯಲ್ಲಿರುವ 572 ಕಿರಿಯ ಪ್ರಾಥಮಿಕ ಶಾಲೆ, 945 ಹಿರಿಯ ಪ್ರಾಥಮಿಕ ಶಾಲೆ ಮತ್ತು 509 ಪ್ರೌಢಶಾಲೆಗಳು ಏಕಕಾಲಕ್ಕೆ ಆರಂಭಗೊಂಡವು.
ಬೇಸಿಗೆ ರಜೆ ನಂತರ ಶಾಲೆಯ ಬೆಲ್ ಮಂಗಳವಾರ ಮತ್ತೆ ಬಾರಿಸಿತು. ರಜೆಯ ಮೋಜು ಅನುಭವಿಸಿದ ಮಕ್ಕಳು ನಿಧಾನ ಶಾಲೆಯತ್ತ ಹೆಜ್ಜೆ ಹಾಕಿದರೆ, ಬಹಳಷ್ಟು ಮಕ್ಕಳು ಮೊದಲ ದಿನ ಹಾಜರಾಗಿರಲಿಲ್ಲ. ಬುಧವಾರದಿಂದ ಪೂರ್ಣ ಪ್ರಮಾಣದಲ್ಲಿ ತರಗತಿಗಳು ನಡೆಯಲಿವೆ. ಬೇಸಿಗೆ ರಜೆಯ ಮಜಾದಲ್ಲಿದ್ದ ಚಿಣ್ಣರು, ಶಾಲೆ ಆರಂಭವಾದ ಮೊದಲ ದಿನ ಶಾಲೆಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಬಾರದಿದ್ದರೂ, ಬೆರಳೆಣಿಕೆಯ ಸಂಖ್ಯೆಯಲ್ಲಿ ಬಂದಿದ್ದ ಮಕ್ಕಳು ಪರಸ್ಪರ ಪರಿಚಯ, ರಜೆಯಲ್ಲಿ ಆಡಿದ ಆಟ, ಅಜ್ಜ-ಅಜ್ಜಿಯರ ಊರಿಗೆ ಹೋಗಿದ್ದಾಗ ನಡೆದ ಘಟನಾವಳಿಗಳನ್ನು ಚರ್ಚಿಸುತ್ತಿದ್ದರು. ಮೊದಲ ದಿನ ಪಾಠ ನಡೆಯದ ಕಾರಣ ಕೆಲ ಶಾಲೆಗಳಲ್ಲಿ ಮಕ್ಕಳು ಆಟವಾಡುವುದರಲ್ಲಿ ಬ್ಯೂಸಿ ಆಗಿರುವುದು ಕಂಡು ಬಂತು. ಸರ್ಕಾರಿ ಅನುದಾನಿತ, ಅನುದಾನ ರಹಿತ ಶಾಲೆಗಳು ಅಧಿಕೃತವಾಗಿ ಆರಂಭಗೊಅಡಿದ್ದು, ಶೈಕ್ಷಣಿಕ ಚಟುವಟಿಕೆಗಳು ಗರಿಗೆದರಿವೆ. ಬೆಳಗ್ಗೆ ಸರಕಾರಿ ಶಾಲೆಗಳಿಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಬರಮಾಡಿಕೊಳ್ಳಲಾಯಿತು. ಕೆಲವು ಶಾಲೆಗಳನ್ನು ತಳಿರುತೋರಣಗಳಿಂದ ಸಿಂಗರಿಸಲಾಗಿತ್ತು. ಶಿಕ್ಷಕರು, ಶಾಲಾ ಆಡಳಿತ ಸಮಿತಿಯ ಮುಖ್ಯಸ್ಥರು, ಸದಸ್ಯರು ಬಾಗಿಲಲ್ಲಿ ನಿಂತು ವಿದ್ಯಾರ್ಥಿ ಗಳನ್ನು ಬರಮಾಡಿಕೊಂಡರು.
ಬೇಸಿಗೆ ರಜೆ ಮುಗಿದು ಇಂದಿನಿಂದ ಆರಂಭಗೊಂಡಿರುವ ಶಾಲೆಗಳಲ್ಲಿ 224 ದಿನ ಶೈಕ್ಷಣಿಕ ಚಟುವಟಿಕೆಗಳು ನಡೆಯಲಿವೆ. 121 ದಿನ ರಜೆ ಇರಲಿದ್ದು, 26 ದಿನ ಪರೀಕ್ಷೆಗಳು ಮತ್ತು ಮೌಲ್ಯಾಂಕನ ಕಾರ್ಯ ಗಳು ನಡೆಯಲಿವೆ. ಪಠ್ಯೇತರ ಚಟುವಟಿಕೆಗಳು, ಸ್ಪರ್ಧೆಗಳ ನಿರ್ವಹಣೆಗೆ 24 ದಿನಗಳನ್ನು ಮೀಸಲಿಡಲಾಗಿದೆ. ಶಾಲೆಗಳ ಸ್ಥಳೀಯ ರಜೆಗಳಿಗೆ ನಾಲ್ಕು ದಿನ, ಮೌಲ್ಯಮಾಪನ ಮತ್ತು ಲಿತಾಂಶ ವಿಶ್ಲೇಷಣೆಗೆ 10 ದಿನ ಹೊರತುಪಡಿಸಿದರೆ ಬೋಧನೆ, ಕಲಿಕೆ ಪ್ರಕ್ರಿಯೆಗಳಿಗೆ 180 ದಿನಗಳು ಲಭ್ಯವಾಗಲಿವೆ ಎಂದು ಶೈಕ್ಷಣಿಕ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದ್ದು, ಅದರಂತೆ ಶಿಕ್ಷಣ ಇಲಾಖೆ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಲಾಗಿದೆ.
ದಾವಣಗೆರೆಯ ವಿನೋಬನಗರದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು, ಮುಖ್ಯೋಪಾಧ್ಯಾಯರು, ಎಸ್ಡಿಎಂಸಿ ಪದಾಧಿಕಾರಿಗಳು ಮಕ್ಕಳ ಮೇಲೆ ಪುಷ್ಪವೃಷ್ಟಿ ಮಾಡುವ ಮೂಲಕ ವಿಶೇಷವಾಗಿ ಬರಮಾಡಿಕೊಂಡರು. ದಾನಿ ಟಿ.ಎಸ್.ನಾಗರಾಜ್ ಅವರು ಮಕ್ಕಳಿಗೆ ಲಾಡು ನೀಡುವ ಮೂಲಕ ಪ್ರೋತ್ಸಾಹ ತುಂಬಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಎಸ್.ಶೋಭಾ, ಎಸ್.ಡಿ.ಎಂಸಿಯ ಕೆ.ಉಷಾ, ರುದ್ರಪ್ಪ, ಕವಿತಾ, ಶೃತಿ ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು.
ಅಕ್ಕಿಯಲ್ಲಿ ಅಕ್ಷರಾಭ್ಯಾಸ ಮಾಡುವ ಮೂಲಕ ಮಕ್ಕಳ ಸ್ವಾಗತ : ಮಾಯಕೊಂಡ : ಮಾಯಕೊಂಡ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಚಿಕ್ಕತೊಗಲೇರಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಅಕ್ಕಿಯಲ್ಲಿ ಅಕ್ಷರಭ್ಯಾಸ ಮಾಡುವ ಮೂಲಕ ಮಕ್ಕಳನ್ನು ಸ್ವಾಗತಿಸಿದರು. ಅಲ್ಲದೇ ಸರಸ್ವತಿ ಪೂಜೆ ಮಾಡಿ ಸಿಹಿ ಹಂಚಲಾಗಿತ್ತು. ಇದೇ ವೇಳೆ ಹೊಸದಾಗಿ 1ನೇ ತರಗತಿಗೆ ದಾಖಲಾದ ಮಕ್ಕಳು ಸರಸ್ವತಿ ಪೂಜೆಯಲ್ಲಿ ಭಾಗವಹಿಸಿ ಅಕ್ಷರ ಸಂಕಲ್ಪ ಕಾಯಕ್ರಮದಲ್ಲಿ ಭಾಗವಹಿಸಿ ಅಕ್ಷರ ಬರವಣಿಗೆ ಅಭ್ಯಾಸ ಮಾಡಿಸಿದರು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರವಿಚಂದ್ರ, ಉಪಾಧ್ಯಕ್ಷ ಸುಧಾ ಜಯಪ್ಪ, ಗ್ರಾಮ ಪಂಚಾಯ್ತಿ ಸದಸ್ಯರಾದ ಶಿವಮೂರ್ತಿ, ವಿಶಾಲಮ್ಮ ಮಂಜುನಾಥ, ಹನುಮಕ್ಕ ಅಣ್ಣಪ್ಪ ಹಾಗೂ ಶಾಲಾ ಶಿಕ್ಷಕ ವರ್ಗದವರು ಹಾಜರಿದ್ದರು.
