‘ಮಿಷನ್ ಕಾವೇರಿ’ ನಮಗೆ ಯಾವುದೇ ಸಹಾಯವಿಲ್ಲ.! ಸುಡಾನ್ ಅಲ್ಪಾಷೇರ್ ನಲ್ಲಿರುವ ಕನ್ನಡಿಗರ ಕಡೆಗಣನೆ
ದಾವಣಗೆರೆ: ಭಾರತ ಸರ್ಕಾರ ಸುಡಾನ್‌ನಲ್ಲಿರುವ ಸಂತ್ರಸ್ಥರನ್ನು ಕರೆ ತರಲು ಮಿಷನ್ ಕಾವೇರಿ ಯೋಜನೆ ರೂಪಿಸಿದ್ದು, ಅದರಿಂದ ನಮಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಸುಡಾನ್‌ನ ಅಲ್ಫಾಷೇರ್ ಸಿಟಿಯಲ್ಲಿ ಸಿಲುಕಿಕೊಂಡಿರುವ ಸಂತ್ರಸ್ಥರು ಆರೋಪಿಸಿದ್ದಾರೆ.
ವೀಡಿಯೋ ಆಡಿಯೋ ಮೂಲಕ ಸುಡಾನ್ ದೇಶದ ಅಲ್ಫಾಷೇರ್ ನಲ್ಲಿರುವ ದಾವಣಗೆರೆ ಜಿಲ್ಲೆಯ ಗೋಪನಾಳ್ ಗ್ರಾಮದ ಪ್ರಭು ತಮ್ಮ ಅಳಲು ತೋಡಿಕೊಂಡಿದ್ದಾರೆ. ಸರ್ಕಾರ ಮಿಷನ್ ಕಾವೇರಿ ಮೂಲಕ ಸಂತ್ರಸ್ಥರ ರಕ್ಷಣೆಗೆ ಮುಂದಾಗಿದೆ. ಆದರೆ ಇಲ್ಲಿನ ಭಾರತೀಯ ರಾಯಭಾರಿ ಸಿಬ್ಬಂದಿಗಳು ಹಣವಿದ್ದವರನ್ನು ಮಾತ್ರ ರಕ್ಷಿಸುತ್ತಿದ್ದಾರೆ. ಬಡವರನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕರ್ನಾಟಕದ ಹಕ್ಕಿಪಿಕ್ಕಿ ಜನಾಂಗ ಸುಡಾನ್ ದೇಶದಲ್ಲಿ ಸಿಲುಕಿಕೊಂಡಿರುವ ಬಗ್ಗೆ ಪ್ರಭು ಸಾಮಾಜಿಕ ಜಾಲತಾಣದಿಂದ ಮಾಹಿತಿ ನೀಡಿದ್ದರು. ಘರ್ಷಣೆ ಪ್ರಾರಂಭದಿಂದಲೂ ಒಟ್ಟು ಸಧ್ಯ ಅಲ್ಫಾಷೇರ್ ನಲ್ಲಿರುವ ಒಂದು ಮನೆಯಲ್ಲಿ ಒಟ್ಟು 68 ಮಂದಿ ಕನ್ನಡಿಗರು ಇದ್ದಾರೆ ಎಂದು ಮಾಹಿತಿ ತಿಳಿಸಿದ್ದಾರೆ.
ಕಳೆದ ಹದಿನೈದು ದಿನಗಳಿಂದ ನೀರು, ಅನ್ನ ಇಲ್ಲದೆ ಬಳಲುತ್ತಿದ್ದೇವೆ. ಮಹಿಳೆಯರು, ವೃದ್ದರು, ಪುರುಷರು, ಮಕ್ಕಳು ಇದ್ದಾರೆ. ಇಲ್ಲಿ ನಮಗೆ ನೀರು ಕೊಡುವವರೂ ಇಲ್ಲದಂತಾಗಿದೆ. ಮನೆ ಮಾಲೀಕ ನಮ್ಮನ್ನು ಹೊರ ಹಾಕಿದ್ದಾನೆ. ನಮ್ಮ ಕಷ್ಟ ಕೇಳುವವರೇ ಇಲ್ಲ.
ಹದಿನೈದು ದಿನಗಳಿಂದಲೂ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ. ಆದರೆ ಯಾವುದೇ ಸಂಘ ಸಂಸ್ಥೆಯಾಗಲೂ, ಸರ್ಕಾರವಾಗಲೀ ಇದುವರೆಗೂ ಸ್ಪಂದಿಸಿಲ್ಲ. ಕೂಡಲೇ ನಮ್ಮನ್ನು ಭಾರತಕ್ಕೆ ಕರೆಯಿಸಿಕೊಳ್ಳಬೇಕು ಎಂದವರು ಒತ್ತಾಯಿಸಿದ್ದಾರೆ.
ಸುಡಾನ್‌ನಲ್ಲಿರುವ ಸಂತ್ರಸ್ಥರು ಭಾರತಕ್ಕೆ ಬರುತ್ತಿದ್ದಾರೆ ಎಂದು ಮಾಧ್ಯಮಗಳ ಮೂಲಕ ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ನಾವುಗಳು ಇಲ್ಲಿ 68 ಜನ ಇದ್ದೇವೆ. ಇಲ್ಲಿಯೇ ಬಳಲುತ್ತಿದ್ದೇವೆ ಎಂದು ಹೇಳಿದರು. ದಾವಣಗೆರೆ ಜಿಲ್ಲೆಯ ಅಸ್ಥಪ್ಪನಹಳ್ಳಿ ಗ್ರಾಮದ 30 ಕ್ಕೂ ಹೆಚ್ಚು ಜನರು ಖಾರ್ಟುಮ್ ಪ್ರದೇಶದಿಂದ ಸ್ಥಳಾಂತರವಾಗಿ ಇದೀಗ ದೆಹಲಿ ತಲುಪಿದ್ದಾರೆ ಆದರೆ ನಾವುಗಳು ಯಾವುದೇ ಸಹಾಯವಿಲ್ಲದೆ ಇಲ್ಲಿ ಬಂಧಿಯಾಗಿದ್ದೆವೆ ಎಂದಿದ್ದಾರೆ.
ಇತ್ತ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಬಸ್ ಮೂಲಕ ಬನ್ನಿ ಅದರ ವೆಚ್ಚ ಕೊಡುವುದಾಗಿ ಹೇಳುತ್ತಾರೆ. ಆದರೆ ಇಲ್ಲಿ ಬಸ್‌ಗಳೇ ಇಲ್ಲ ಎಂದು ಕೆಲವರು ಆರೋಪಿಸಿದ್ದಾರೆ. ಪ್ರತಿ ನಿತ್ಯ ಅಲ್ಫಷೇರ್ ನಿಲ್ದಾಣಕ್ಕೆ ಹೋಗಿ ಬಸ್ ಗಾಗಿ ಹುಡುಕಾಟ ನಡೆಸುತ್ತಿದ್ದೆವೆ ಅದ್ರೆ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಪ್ರಭು.
ಅಲ್ಫಾಷೇರ್ ಪ್ರದೇಶದಿಂದ ಸುಡಾನ್ ಪೋರ್ಟ್ ಗೆ ಹೋದರೆ ನಮಗೆ ಶೀಪ್ ಸಿಗಬಹುದು, ಆದ್ರೆ ಅಲ್ಲಿಗೆ ಹೋಗಲು ಆಗುತ್ತಿಲ್ಲವಂತೆ,
ಈ ಬಗ್ಗೆ ದಾವಣಗೆರೆ ಮಾಧ್ಯಮದವರು ಗಮನಕ್ಕೆ ತಂದಾಗ ನಾವುಗಳು ಇಂಡಿಯನ್ ಎಂಬಸಿಯ ನೋಡಲ್ ಆಫಿಸರ್ ಜೊತೆ ಮಾತನಾಡಿ ಆದಷ್ಟು ಬೇಗ ಅವರನ್ನ ಭಾರತಕ್ಕೆ ಕರೆಯಿಸಿಕೊಳ್ಳಲಾಗುತ್ತೆ ಎಂದಿದ್ದಾರೆ.