ನವೀನ್ ಮೃತದೇಹ ಆಸ್ಪತ್ರೆಗೆ ದಾನ : ಪೋಷಕರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಎಸ್.ಎಸ್ ಮಲ್ಲಿಕಾರ್ಜುನ್
ದಾವಣಗೆರೆ: ಉಕ್ರೇನ್‌ನಲ್ಲಿ ಮೃತನಾದ ವೈದ್ಯಕೀಯ ವಿದ್ಯಾರ್ಥಿ ನವೀನ್ ಮೃತದೇಹವನ್ನು ದಾವಣಗೆರೆ ಎಸ್.ಎಸ್. ಆಸ್ಪತ್ರೆಗೆ ದಾನವಾಗಿ ನೀಡಲು ಪೋಷಕರು ನಿರ್ಧರಿಸಿದ್ದನ್ನು ಆಸ್ಪತ್ರೆಯ ಆಡಳಿತ ಮಂಡಳಿ ಮುಖ್ಯಸ್ಥ ಎಸ್.ಎಸ್ ಮಲ್ಲಿಕಾರ್ಜುನ್ ಸ್ವಾಗತಿಸಿದ್ದಾರೆ. ಮೃತ ದೇಹವನ್ನು ದಾನವಾಗಿ ನೀಡುವ ಬಗ್ಗೆ ದಾವಣಗೆರೆಯಲ್ಲಿ ಎಸ್.ಎಸ್. ಆಸ್ಪತ್ರೆಯ ಮುಖ್ಯಸ್ಥ ಎಸ್.ಎಸ್. ಮಲ್ಲಿಕಾರ್ಜುನ್ ಖಚಿತಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನವೀನ್ ಮೃತದೇಹವನ್ನು ಎಸ್.ಎಸ್. ಆಸ್ಪತ್ರೆಗೆ ದಾನವಾಗಿ ನೀಡುತ್ತೇವೆ ಎಂದು ಪೋಷಕರು ತಿಳಿಸಿದ್ದಾರೆ. ಪೋಷಕರು ನವೀನ್ ಮೃತದೇಹ ಮೆಡಿಕಲ್ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿ ಎಂದು ದಾನವಾಗಿ ನೀಡುತ್ತಿದ್ದಾರೆ.
ಪೋಷಕರು ಅವರ ಮಗ ಡಾಕ್ಟರ್ ಆಗಬೇಕು ಎಂದು ಆಸೆ ಇಟ್ಟುಕೊಂಡಿದ್ದರು. ಆದರೆ ಎರಡು ದೇಶಗಳ ನಡುವಿನ ಯುದ್ಧದ ದಾಳಿಯಿಂದ ಸಾವನ್ನಪ್ಪಿದ್ದು ಆತನ ಮೃತದೇಹವಾದರೂ ಮೆಡಿಕಲ್ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿ ಎಂದು ಆಸೆಪಡುತ್ತಿದ್ದಾರೆ. ನಮ್ಮ ಆಸ್ಪತ್ರೆಗೆ ಯಾರೇ ಮೃತದೇಹ ದಾನ ಮಾಡಿದರೂ ಅಂತಹ ಕುಟಂಬಕ್ಕೆ ಆಸ್ಪತ್ರೆಯ ಚಿಕಿತ್ಸೆಯಲ್ಲಿ ರಿಯಾಯಿತಿ ಇದೆ. ಮಗನ ಮೃತದೇಹವನ್ನು ದಾನವಾಗಿ ನೀಡಿದ ತಾಯಿ-ತಂದೆ ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಮಲ್ಲಿಕಾರ್ಜುನ್ ಶ್ಲಾಘಿಸಿದರು.