ಇತಿಹಾಸ ತಿಳಿಯಲು ನಿರ್ಲಕ್ಷ್ಯ ಸಲ್ಲ: ಕಸಾಪ ದಾವಣಗೆರೆ ಜಿಲ್ಲಾಧ್ಯಕ್ಷ ವಾಮದೇವಪ್ಪ
ದಾವಣಗೆರೆ: ನಮ್ಮ ನಾಡಿನ ಇತಿಹಾಸ ತಿಳಿಯುವಲ್ಲಿ ನಾವು ನಿರ್ಲಕ್ಷ್ಯ ವ ಹಿಸುತ್ತೇವೆ. ಆದರೆ ವಿದೇಶಿಗರೇ ಇಲ್ಲಿನ ಇತಿಹಾಸ ಉತ್ತಮವಾಗಿ ಅರಿತಿದ್ದಾರೆ. ಬಸವರಾಜ ಯಳಮಲ್ಲಿ ಅವರ ಈ ಅರಸೊತ್ತಿಗೆಗಳ ಪಟ ನಾಡಿನ ಇತಿಹಾಸ ತಿಳಿಸಿಕೊಡುವಲ್ಲಿ ಉತ್ತಮ ಪಾತ್ರ ವಹಿಸುತ್ತದೆ. ಇದೊಂದು ಪ್ರಶಂಸನೀಯ ಕಾರ್ಯವಾಗಿದ್ದು, ಈ ಪಟವು ಗಿನ್ನಿಸ್ ದಾಖಲೆಯ ಪುಸ್ತಕದಲ್ಲಿ ನಮೂದಾಗುವಂತಾಗಲಿ ಎಂದು ಆಶಿಸಿದರು. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ತಾವು ಇತಿಹಾಸ ತಿಳಿದು ಇತರರಿಗೂ ತಿಳಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಆಶಿಸಿದರು.
ಗುರುವಾರ ಕುವೆಂಪು ಕನ್ನಡ ಭವನದಲ್ಲಿ ಚನ್ನವೀರಪ್ಪ ಯಳಮಲ್ಲಿ ಮೆಮೋರಿಯಲ್ ಟ್ರಸ್ಟ್ ಹಾಗೂ ಜಿಲ್ಲಾ ಕನ್ನಡ ಸಾರಿತ್ಯ ಪರಿಷತ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಸವರಾಜ ಯಳಮಲ್ಲಿ ಅವರ `ಕರುನಾಡ ಅರಸೊತ್ತಿಗೆಗಳು’ ಇತಿಹಾಸ ಮಾಹಿತಿ ಕುರಿತ ಪಟ ಬಿಡುಗಡೆ ಮಾಡಿ ಅವರು ಮಾತನಾಡಿದರು.
ನಮ್ಮ ನಾಡು, ದೇಶದ ಇತಿಹಾಸದ ಕುರಿತು ಪ್ರತಿಯೊಬ್ಬರೂ ತಿಳಿದುಕೊಂಡಿರಬೇಕು. ಇತಿಹಾಸದ ವಿದ್ಯಾರ್ಥಿಗಳು ಮಾತ್ರ ಇತಿಹಾಸ ತಿಳಿದಿರಬೇಕು ಎಂದಿಲ್ಲ. ತಾವು ವಾಸಿಸುವ ಊರು, ರಾಜ್ಯ ಹಾಗೂ ದೇಶದ ಇತಿಹಾಸದ ಅರಿವು ಎಲ್ಲರಿಗೂ ಇರಬೇಕು. ಇತಿಹಾಸ ಅರಿಯದನು ಹೊಸ ಇತಿಹಾಸ ಸೃಷ್ಟಿಸಲಾರ ಎಂಬ ಮಾತು ಸತ್ಯ ಎಂದರು.
ಎ.ವಿ. ಕಮಲಮ್ಮ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ.ಬಿ.ಪಿ. ಕುಮಾರ್ ಮಾತನಾಡುತ್ತಾ, ಇತಿಹಾಸದ ಅಧ್ಯಯನದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಲು ಸಹಾಯಕವಾಗುತ್ತದೆ ಎಂದು ಹೇಳಿದರು.
ಐಎಎಸ್ ಹಾಗೂ ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇತಿಹಾಸಕ್ಕೆ ಸಂಬಂಧಿತ ಪ್ರಶ್ನೆಗಳಿರುತ್ತವೆ. ಸಾಮಾನ್ಯ ಇತಿಹಾಸ ಪುಸ್ತಕದಲ್ಲಿ ಸಣ್ಣ ಸಂತತಿಗಳ ಮಾಹಿತಿ ಇರುವುದಿಲ್ಲ. ಆದ್ದರಿಂದ ಆಳವಾದ ಅಧ್ಯಯನ ಮಾಡಬೇಕು. ಆಗ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹುದು ಎಂದರು.
ವಿಜ್ಞಾನ ವಿದ್ಯಾರ್ಥಿಗಳು ಇತಿಹಾಸ ಓದಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುತ್ತಾರೆ. ಆದರೆ ಇತಿಹಾಸದ ವಿದ್ಯಾರ್ಥಿಗಳೇ ಅದರ ಆಳ ತಿಳಿಯಲು ಹಿಂಜರಿಯುತ್ತಾರೆ. ಇತಿಹಾಸಕ್ಕೆ ಕಾಲ ಹಾಗೂ ಸ್ಥಳ ಎಂಬ ಎರಡು ಕಣ್ಣುಗಳಿವೆ. ಯಾವಾಗ ಮತ್ತು ಎಲ್ಲಿ ಯಾರು ಅಳ್ವಿಕೆ ನಡೆಸಿದರು ಎಂಬ ಮಹತ್ವ ಪೂರ್ಣ ಮಾಹಿತಿ ಕರುನಾಡ ಅರಸೊತ್ತಿಗೆಗಳು ಪಟದಲ್ಲಿ ದೊರೆಯುತ್ತದೆ ಎಂದರು.
ಕಲೆಯ ಬಗ್ಗೆ ಆಸಕ್ತಿ ಇಲ್ಲದವನು ಪಶುವಿಗೆ ಸಮಾನ ಎಂಬ ಮಾತಿದೆ. ಹಾಗೆಯೇ ವಿದ್ಯಾರ್ಥಿಗಳು ಕಲಾ ವಿಹೀನರಾಗಬಾರದು ಎಂದು ಕಿವಿ ಮಾತು ಹೇಳಿದರು. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ನಟರಾಜ್ ಡಿ.ಆರ್. ಮಾತನಾಡಿದರು.
ಇದೇ ಸಂದರ್ಭದಲ್ಲಿ ಚಂದನ್ ಪಬ್ಲಿಸಿಟಿಯ ಡಿ.ಶೇಷಾಚಲ ಅವರನ್ನು ಹಾಗೂ ಕಸಾಪದಿಂದ ಬಸವರಾಜ ಯಳಮಲ್ಲಿ ಅವರನ್ನು ಗೌರವಿಸಲಾಯಿತು. ಚನ್ನವೀರಪ್ಪ ಯಳಮಲ್ಲಿ ಮೆಮೋರಿಯಲ್ ಟ್ರಸ್ಟ್ ಗೌರವಾಧ್ಯಕ್ಷ ಎನ್.ಟಿ. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.
ಕು.ಶಿಶಿರ ಹೆಚ್.ಆರ್. ಪ್ರಾರ್ಥಿಸಿದರು. ಕು.ಸಹನ ಎಸ್.ಕೆ. ಸ್ವಾಗತಿಸಿದರು. ಕು.ಸೃಷ್ಟಿ ಎಂ.ಪಿ. ಹಾಗೂ ಕು.ಸಂಧ್ಯಾ ಹೆಚ್. ಕಾರ್ಯಕ್ರಮ ನಿರೂಪಿಸಿದರು. ಕು.ಲಕ್ಷ್ಮೀ ಕೆ.ಎಂ. ವಂದಿಸಿದರು.