ದಾವಣಗೆರೆಯಲ್ಲಿ ಅಡಿಕೆ ದರ ಕಂಡು ಬೆಳೆಗಾರರಲ್ಲಿ ಮೂಡಿದ ಮಂದಹಾಸ
ದಾವಣಗೆರೆ, ಡಿಸೆಂಬರ್, 10: ಅಡಿಕೆ ಧಾರಣೆಯು ಕಳೆದ ಒಂದು ವಾರದಿಂದ ಸ್ಥಿರವಾಗಿದ್ದು, ಏರಿಕೆಯೂ ಆಗಿಲ್ಲ, ಕುಸಿತವಾಗಿಯೂ ಆಗಿಲ್ಲ. ಸ್ವಲ್ಪ ಪ್ರಮಾಣದಲ್ಲಿ ಏರಿಳಿತ ಕಂಡು ಬಂದರೂ ಧಾರಣೆಯಲ್ಲಿ ಹೇಳಿಕೊಳ್ಳುವಂತಹ ವ್ಯತ್ಯಾಸ ಏನೂ ಆಗಿಲ್ಲ. ಇದು ರೈತರಿಗೆ ಸ್ವಲ್ಪ ಪ್ರಮಾಣದಲ್ಲಿ ಸಮಾಧಾನ ತಂದಿದೆ.
ಕಳೆದ ನಾಲ್ಕೈದು ತಿಂಗಳಿಂದಲೂ ಅಡಿಕೆ ಧಾರಣೆ ಏರುತ್ತಾ, ಕುಸಿಯುತ್ತಾ ಇದ್ದದ್ದು ರೈತರ ಆತಂಕಕ್ಕೆ ಕಾರಣವಾಗಿತ್ತು. ಆದರೆ ಈಗ ಧಾರಣೆಯು ಸ್ಥಿರವಾಗಿರುವುದು ರೈತರಿಗೆ ಸಮಾಧಾನ ತಂದಿದ್ದರೂ, ಏರಿಕೆಯಾಗಿಲ್ಲ ಎಂಬ ಕೊರಗು ಕಾಡಲಾರಂಭಿಸಿದೆ. ಯಾಕೆಂದರೆ ಈ ವರ್ಷ ಫಸಲು ಕಡಿಮೆ ಬಂದಿದ್ದು, ಧಾರಣೆಯು ಕಡಿಮೆಯಾಗಿದೆ. ಈ ಕಾರಣಕ್ಕಾಗಿ ರೈತರು ಧಾರಣೆ ಏರಿಕೆಯಾಗುವ ನಿರೀಕ್ಷೆ ಹೊಂದಿದ್ದಾರೆ.
2024ರ ಜನವರಿ ತಿಂಗಳಿನಲ್ಲಿ ಅಡಿಕೆ ಧಾರಣೆಯಲ್ಲಿ ಏರಿಕೆಯಾಗಬಹುದು ಎಂಬ ಆಶಾಭಾವನೆ ರೈತರದ್ದಾಗಿದೆ. ಆದರೆ ಮತ್ತೆ ಎಲ್ಲಿ ಅಡಿಕೆ ದರ ಕುಸಿಯುತ್ತದೆಯೋ ಎಂಬ ಆತಂಕವೂ ಸಹಜವಾಗಿಯೇ ಕಾಡಲಾರಂಭಿಸಿದೆ. ರೈತರು ಅಡಿಕೆ ಧಾರಣೆ ಏರಬಹುದೆಂಬ ನಿರೀಕ್ಷೆಯನ್ನೂ ಇಟ್ಟುಕೊಂಡಿದ್ದಾರೆ. ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ವಹಿವಾಟು ಸಹ ಹೆಚ್ಚಾಗಿ ನಡೆಯುತ್ತಿಲ್ಲ. ಕ್ವಿಂಟಾಲ್ ಅಡಿಕೆ ಧಾರಣೆಯು 50,000 ರೂಪಾಯಿ ಗಡಿ ದಾಟುತ್ತಿಲ್ಲ. ಈ ಕಾರಣಕ್ಕಾಗಿಯೇ ರೈತರು ಮಾರುಕಟ್ಟೆಯಲ್ಲಿ ಅಡಿಕೆ ಬಿಡಬೇಕೋ ಅಥವಾ ಮನೆಯಲ್ಲಿಯೇ ಶೇಖರಿಸಿಕೊಟ್ಟುಕೊಳ್ಳಬೇಕೋ ಎಂಬ ಗೊಂದಲದಲ್ಲಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದು. ಅದರಲ್ಲಿಯೂ ಅಡಿಕೆ ನಾಡು ಚನ್ನಗಿರಿ ತಾಲೂಕಿನಲ್ಲಿ ಹೆಚ್ಚಾಗಿ ಅಡಿಕೆ ಬೆಳೆಯಲಾಗುತ್ತಿದೆ. ವಾರದಲ್ಲಿ ಮೂರು ದಿನ ಮಾತ್ರ ಅಡಿಕೆ ಧಾರಣೆ ನಿರ್ಧಾರ ಆಗುತ್ತದೆ. ಅಡಿಕೆ ಬೆಲೆಯಲ್ಲಿ ಕಳೆದ ಒಂದು ವಾರದಿಂದ ಸ್ಥಿರ ಧಾರಣೆ ಇದ್ದು, ಗರಿಷ್ಠ ಬೆಲೆ 47,585 ರೂಪಾಯಿ ಆಗಿದ್ದರೆ, ಕನಿಷ್ಠ ಬೆಲೆ 45,399 ರೂಪಾಯಿ ದಾಖಲಿಸಿದೆ.
ಏಪ್ರಿಲ್ ತಿಂಗಳಿನಲ್ಲಿ 48 ಸಾವಿರ ರೂಪಾಯಿ ಇದ್ದ ಪ್ರತಿ ಕ್ವಿಂಟಾಲ್ ಅಡಿಕೆ ಧಾರಣೆಯು ಮೇ ತಿಂಗಳಿನಲ್ಲಿ 49 ಸಾವಿರ ರೂಪಾಯಿಗೆ ಏರಿಕೆಯಾಗಿತ್ತು. ಜುಲೈ ತಿಂಗಳಿನಲ್ಲಿ ಗರಿಷ್ಠ 57 ಸಾವಿರ ರೂಪಾಯಿ ಮುಟ್ಟಿದ್ದರೆ, ಕೇವಲ ಒಂದೇ ತಿಂಗಳಿಗೆ 10 ಸಾವಿರ ರೂಪಾಯಿ ಧಾರಣೆ ಕುಸಿತ ಕಂಡಿತ್ತು. 57 ಸಾವಿರ ರೂಪಾಯಿ ಅಡಿಕೆ ಧಾರಣೆ ಇದ್ದಾಗಲೂ ಮತ್ತಷ್ಟು ಏರಿಕೆ ಆಗಬಹುದು ಎಂಬ ಕಾರಣಕ್ಕೆ ರೈತರು ಮಾರುಕಟ್ಟೆಯಲ್ಲಿ ಅಡಿಕೆ ಬಿಟ್ಟಿರಲಿಲ್ಲ.
ಮತ್ತೆ ಕಡಿಮೆಯಾದ ಕಾರಣಕ್ಕೆ ಅಡಿಕೆಯನ್ನು ಮಂಡಿಯಲ್ಲಿ ಬಿಡದೇ ಮನೆಯಲ್ಲಿ ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ. ಈಗ ಅಡಿಕೆ ಧಾರಣೆ 50 ಸಾವಿರ ರೂಪಾಯಿ ಗಡಿ ಮುಟ್ಟುತ್ತಿಲ್ಲ, ದಾಟುತ್ತಲೂ ಇಲ್ಲ. ಈ ಹಿನ್ನೆಲೆ ರೈತರು ಏನು ಮಾಡಬೇಕು ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಈ ತಿಂಗಳ ಮೊದಲ ವಾರದಲ್ಲಿ 100, 200 ರೂಪಾಯಿ ಏರಿಕೆಯಾಗುವುದು, ಕಡಿಮೆಯಾಗುವುದು ನಡೆಯುತ್ತಲೇ ಇದೆ. ಹೆಚ್ಚಿನ ಪ್ರಮಾಣದಲ್ಲಿ ದರ ಏರಿಳಿತವಾಗದಿದ್ದರೂ ಅಡಿಕೆ ಧಾರಣೆ 47 ಸಾವಿರ ರೂಪಾಯಿಯ ಆಸುಪಾಸಿನಲ್ಲಿಯೇ ಇದೆ. ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ಪ್ರತಿ ಕ್ವಿಂಟಾಲ್ ಉತ್ತಮ ರಾಶಿ ಅಡಿಕೆಗೆ ಕನಿಷ್ಠ ಬೆಲೆ 45,399 ರೂಪಾಯಿ ಇದ್ದರೆ, ಗರಿಷ್ಠ ಧಾರಣೆ 47,585 ರೂಪಾಯಿ ಆಗಿದೆ. ಸರಾಸರಿ ದರ 47,155 ರೂಪಾಯಿ ಆಗಿದೆ. ಇನ್ನೂ ಬೆಟ್ಟೆ ಅಡಿಕೆ ಗರಿಷ್ಠ 38,500 ರೂಪಾಯಿ ದಾಖಲಿಸಿದೆ.
ಒಟ್ಟಿನಲ್ಲಿ ಅಡಿಕೆ ಬೆಳೆಗಾರರು ಈ ವರ್ಷ ಹೆಚ್ಚಿನ ಪ್ರಮಾಣದ ಬೆಳೆ ನಿರೀಕ್ಷಿಸಿದ್ದರು. ಹವಾಮಾನ ವೈಪರೀತ್ಯ, ಮಳೆ ಕೊರತೆ, ಅಡಿಕೆ ಗಟ್ಟಿಯಾಗಿಲ್ಲ. ಇದರಿಂದಾಗಿ ತೂಕವೂ ಬರುತ್ತಿಲ್ಲ. ಇದಕ್ಕೆ ಕಾರಣ ಮಳೆಯ ಕೊರತೆ ಮತ್ತು ಅಡಿಕೆ ಗಿಡಗಳಿಗೆ ಸರಿಪ್ರಮಾಣದ ನೀರು ಲಭ್ಯತೆ ಇರುವುದು. ಅಡಿಕೆ ಗಟ್ಟಿಯಾಗಿ ಬಂದರೆ ತೂಕ ಹೆಚ್ಚಾಗಿ ಬರುತ್ತದೆ. ತೂಕ ಬಾರದ ಕಾರಣ ಅಡಿಕೆ ಹೆಚ್ಚಾಗಿ ತೂಕ ಬರುತ್ತಿಲ್ಲ. ಇದರಿಂದಾಗಿ ಆದಾಯವು ಅರ್ಧಕ್ಕರ್ಧ ಕಡಿಮೆಯಾಗಿದೆ ಎನ್ನುತ್ತಾರೆ ಅಡಿಕೆ ಬೆಳೆಗಾರರು.