ಪ್ರಧಾನಿ ಮೋದಿ ಅವರ ಆಶೀರ್ವಾದ ಸಿಕ್ಕಿದ್ದು ಗೆಲುವಿನ ದಿಕ್ಸೂಚಿ : ಗಾಯತ್ರಿ ಸಿದ್ದೇಶ್ವರ್
ದಾವಣಗೆರೆ : ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಲೋಕಸಭಾ ಚುನಾವಣಾ ಪ್ರಚಾರ ಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಕದಲ್ಲಿ ತೆರೆದ ವಾಹನದಲ್ಲಿ ಹೋಗಿದ್ದು ನನ್ನ ಪುಣ್ಯ. ಈ ಮೂಲಕ ಅವರು ನನ್ನ ಗೆಲುವಿಗೆ ಆಶೀರ್ವಾದ ಮಾಡಿದ್ದಾರೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ತಿಳಿಸಿದರು.
ಸಭೆಯ ಬಳಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತೆರೆದ ವಾಹನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಕದಲ್ಲಿ ನಿಂತು ಲಕ್ಷಾಂತರ ಜನರ ನಡುವೆ ರ್ಯಾಲಿಯಲ್ಲಿ ಹೋಗಲು ನನಗೆ ಅವಕಾಶ ಸಿಕ್ಕಿದ್ದು, ನನ್ನ ಗೆಲುವಿನ ದಿಕ್ಸೂಚಿ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಬಾಯಿ ಮಾತಿನಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವುದಿಲ್ಲ. ಅದನ್ನು ಮಾಡಿ ತೋರಿಸುತ್ತಾರೆ. ಮಹಿಳಾ ಕೋಟದಲ್ಲಿ ನನಗೆ ಟಿಕೆಟ್ ಕೊಟ್ಟಿದ್ದಲ್ಲೇ ಅವರ ಪಕ್ಕದಲ್ಲಿ ರ್ಯಾಲಿಯಲ್ಲಿ ಭಾಗವಹಿಸಲು ನನಗೆ ಅವಕಾಶ ಕಲ್ಪಿಸುವ ಮೂಲಕ ಲಕ್ಷಾಂತರ ಮಹಿಳೆಯರಿಗೆ ಗೌರವ ಸೂಚಿಸಿದ್ದಾರೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿಯನ್ನಾಗಿ ಮಾಡಲು ಅಹೋರಾತ್ರಿ ಶ್ರಮಿಸುತ್ತೇವೆ ಎಂದು ತಿಳಿಸಿದರು.
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿಈ ಬಾರಿಯೂ ಬಿಜೆಪಿ ಅಲೆ ಜೋರಾಗಿದೆ. ಕಳೆದ 28 ವರ್ಷಗಳಿಂದ ದಾವಣಗೆರೆ ಕ್ಷೇತ್ರ ಬಿಜೆಪಿ ಭದ್ರ ಕೋಟೆ. ಈ ಬಾರಿಯೂ ನಾನು ಇಲ್ಲಿಂದ ಕಮಲದ ಹೂವು ಮುಡಿದುಕೊಂಡು ದೆಹಲಿಗೆ ಹೋಗಲು ಜನ ಆಶೀರ್ವಾದ ಮಾಡುತ್ತಿದ್ದಾರೆ. ಇಡೀ ದೇಶ ಸುಭದ್ರ, ಸುಭೀಕ್ಷವಾಗಿ ಇರಬೇಕು ಅಂದರೆ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಎಲ್ಲ ವರ್ಗದವರು ಆಶಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕ ಬಿ.ಪಿ.ಹರೀಶ್, ಬಿಜೆಪಿ ಮುಖಂಡರಾದ ಜಿ.ಎಸ್.ಅನಿತ್ ಕುಮಾರ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಪ್ರಧಾನ ಕಾರ್ಯದರ್ಶಿ ಐರಣಿ ಅಣ್ಣೇಶ್ ಮತ್ತಿತರರು ಉಪಸ್ಥಿತರಿದ್ದರು.