ಪೋಲೀಸ್ ಠಾಣೆಯಲ್ಲಿ ಕಾನೂನು ಪಾಲನೆಯಾಗುತ್ತಿದೆಯಾ.? ಆ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದು ಯಾಕೆ.?
ದಾವಣಗೆರೆ: ದಾವಣಗೆರೆಯ ಆಜಾದ್ ನಗರ ಠಾಣೆ ಪೊಲೀಸರು ಸಂವಿಧಾನವನ್ನು ದುರ್ಬಳಕೆ ಮಾಡಿಕೊಂಡು, ಹಣ ನೀಡುವ ದೂರುದಾರರ ಪರ ಕಾನೂನು ಪಾಲನೆ ಮಾಡುತ್ತಿದ್ದಾರೆ. ಇವರ ದರ್ಪದಿಂದ ಓರ್ವ ವ್ಯಕ್ತಿ ಆತ್ಮಹತ್ಯೆಗೆ ಪ್ರಯತ್ನಿಸಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ.!
ನಾಗರಿಕರಿಗೆ ಸಿಗಬೇಕಾದ ಮಾನವ ಹಕ್ಕುಗಳನ್ನು ಕಿತ್ತುಕೊಂಡು, ಹಣಕ್ಕಾಗಿ ಆಜಾದ್ ನಗರ ಠಾಣೆ ಪೊಲೀಸರು ತಮಗೆ ಬೇಕಾದಂತೆ ಕಾನೂನು ರೂಪಿಸುತ್ತಿದ್ದಾರೆ. ಅಮಾಯಕ ಹೆಣ್ಣು ಮಗಳ ಮೇಲೆ ದೌರ್ಜನ್ಯ ನಡೆಸಿದ್ದು ಈಗಾಗಲೇ ಪ್ರಕರಣ ದಾಖಲಾಗಿದೆ. ಅಲ್ಲದೇ, ಮಟ್ಕಾ ಜೂಜಾಟ, ಅಕ್ರಮ ಪಡಿತರ ಅಕ್ಕಿ ದಾಸ್ತಾನು ಮಾಡುವವರ ಬಳಿ ಹಣ ಪೀಕುತ್ತಿದ್ದಾರೆ ಎನ್ನುವ ಆರೋಪವೀಗ ಕೇಳಿಬಂದಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಇತ್ತೀಚೆಗಷ್ಟೆ ಠಾಣಾ ವ್ಯಾಪ್ತಿಯಲ್ಲಿ ಅಕ್ಕಪಕ್ಕದ ಮನೆಯವರು ನಡೆಸಿದ್ದ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು, ಉಭಯೇತರರನ್ನು ಕರೆಯಿಸಿ ರಾಜೀ ಪಂಚಾಯ್ತಿ ಮಾಡಿ ಯಾವುದೇ ದೂರು ಪ್ರತಿದೂರನ್ನು ದಾಖಲಿಸಿಕೊಳ್ಳದೇ ಕಳುಹಿಸಿದ್ದು, ಆದರೆ, ಮರುದಿನವೇ ಹಣದ ಆಮಿಷಕ್ಕೆ ಒಳಗಾಗಿ ದೂರು ನೀಡಲು ಬಂದಿದ್ದವರ ಎದುರುದಾರರಿಗೆ ಯಾವುದೇ ಮಾಹಿತಿ ನೀಡದೆ ಐವರ ವಿರುದ್ದ ಕುಲ್ಲಕ್ಷ ಕಾರಣದ ಜಗಳಕ್ಕೆ ದರೋಡೆ ಪ್ರಕರಣದಡಿ ದೂರು ದಾಖಲಿಸಿ, ಐವರನ್ನು ಬಂಧಿಸಿ, ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಹಣ ನೀಡಿದರೆ ಇಬ್ಬರನ್ನು ಪ್ರಕರಣದಿಂದ ಕೈಬಿಡುತ್ತೇವೆ ಎಂದು 40 ಸಾವಿರದ ಬೇಡಿಕೆ ಇಟ್ಟಿದ್ದಾರೆ. ಪ್ರತಿ ದೂರು ದಾಖಲಿಸಲು ಹೇಳಿದರೆ ಹಾಗೆ ಮಾಡಲು ಬರುವುದಿಲ್ಲ ಎಂದಿದ್ದಾರೆ ಎನ್ನಲಾಗಿದೆ.
ಅಷ್ಟೇ ಅಲ್ಲದೇ ಪ್ರತಿ ದೂರು ದಾಖಲಿಸಿ ಎಂದು ಹೇಳಿದವರ ವಿರುದ್ಧವೇ ಹಣ ನೀಡಿಲ್ಲದ ಸಿಟ್ಟಿಗೆ ಖಾಕೀ ಖದರ್ ತೋರಿಸುತ್ತೇವೆ ಎಂದು ಧಮ್ಕಿ ಹಾಕಿರುವ ಪೊಲೀಸರ ಬಗ್ಗೆ ಬೇಸರಗೊಂಡು ವ್ಯಕ್ತಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಆಸ್ಪತ್ರೆಯಲ್ಲೀಗ ಚಿಕಿತ್ಸೆ ಪಡೆಯುತ್ತಿದ್ದು, ಕೂಡಲೇ ಇಂತಹ ಪೊಲೀಸರನ್ನು ಅಮಾನತ್ತುಗೊಳಿಸಬೇಕು, ಇಲ್ಲವಾದರೆ ಕೆಲಸದಿಂದ ವಜಾಗೊಳಿಸಬೇಕೆಂದು ಅಲ್ಲಿನ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.