ಮಹಿಳೆಯರು ಸಾಧನೆಯ ಸಂಕಲ್ಪತೊಟ್ಟು ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಿದಾಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ : ಡಾ. ಪ್ರಭಾ ಮಲ್ಲಿಕಾರ್ಜುನ್.

ದಾವಣಗೆರೆ: ಮಹಿಳೆಯರು ಸಾಧನೆಯ ಸಂಕಲ್ಪತೊಟ್ಟು ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಿದಾಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯವಾಗಲಿದೆ ಎಂದು ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಹನಿವೆಲ್ ಮತ್ತು ಐಸಿಟಿ ಅಕಾಡೆಮಿ ಇವರ ಸಹಯೋಗದಲ್ಲಿ ನಗರದ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನ ಆರ್ಯಭಟ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಮಹಿಳಾ ಸಬಲೀಕರಣದ ನೈಪುಣ್ಯತ ಕೇಂದ್ರ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಹಿಳೆಯರು ಅಭಿವೃದ್ಧಿ ಹೊಂದಲು ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಅದರ ಜತೆಗೆ ಸ್ವಯಂ ವಿಶ್ಲೇಷಣೆಗೆ ಒಳಪಟ್ಟು, ಆತ್ಮಸ್ಥೈರ್ಯದಿಂದ ಉದ್ಯೋಗಕ್ಕೆ ಬೇಕಾದ ಕೌಶಲ್ಯಗಳ ಪಡೆದುಕೊಂಡು ಸಾಧನೆಯತ್ತ ಗಮನಹರಿಸಿ ಎಂದು ಸಲಹೆ ನೀಡಿದರು.
ಧ್ಯಾನ ನಿಮ್ಮ ಮನಸ್ಸನ್ನು ಕೇಂದ್ರಿಕರಿಸಲು ಸಹಾಯ ಮಾಡುತ್ತದೆ. ಯೋಗ, ಧ್ಯಾನ, ಪ್ರಾಣಾಯಾಮಗಳನ್ನು ಮಾಡುವ ಮೂಲಕ ದೈಹಿಕ ಮತ್ತು ಮಾನಸಿಕ ಸಮತೋಲನ ಕಾಪಾಡಿಕೊಂಡು ಸಾಧನೆಗೆ ಮುಂದಾಗಿ ಎಂದು ಕರೆ ನೀಡಿದರು.
ಹನಿವೆಲ್ ಮತ್ತು ಐಸಿಟಿ ಅಕಾಡೆಮಿಯಿಂದ ಸ್ಥಾಪಿಸಲಾಗುತ್ತಿರುವ ಮಹಿಳಾ ಸಬಲೀಕರಣ ನೈಋಣ್ಯತ ಕೇಂದ್ರವು ವಿದ್ಯಾರ್ಥಿಗಳಿಗೆ ಕೌಶಲ್ಯ ಪಡೆಯಲು ಅನುಕೂಲವಾಗಲಿದ್ದು, ಕೌಶಲ್ಯ ತರಬೇತಿ ಕಾರ್ಯಕ್ರಮದ ಕೊನೆಯಲ್ಲಿ ಉದ್ಯೋಗದ ಸಹಾಯ ನೀಡುತ್ತಿರುವುದು ಅಭಿನಂದನಾರ್ಹವಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ತಿಳಿಸಿದರು.
ಪ್ರಭಾರ ಪ್ರಾಂಶುಪಾಲ ಕೆ.ಎಸ್. ಬಸವರಾಜಪ್ಪ ಮಾತನಾಡಿ, ಮಹಿಳಾ ಸಬಲೀಕರಣಕ್ಕೆ ಶಿಕ್ಷಣ ಅತ್ಯಂತ ಪ್ರಮುಖವಾಗಿರುವ ಅಸ್ತ್ರ ಎನ್ನಬಹುದು. ಪ್ರತಿ ಮಹಿಳೆ ಶಿಕ್ಷಣ ಪಡೆದುಕೊಂಡಾಗ ಮಾತ್ರ ಆಕೆ ಆರ್ಥಿಕ ಸ್ವಾವಲಂಭಿತನ, ಬೆಳವಣಿಗೆಗೆ ಸಹಾಯವಾಗಲಿದೆ ಎಂದು ಹೇಳಿದರು.
ಶಿಕ್ಷಿತ ಮಹಿಳೆ ಕೇವಲ ಕುಟುಂಬದ ಏಳಿಗೆಗೆ ಮಾತ್ರವಲ್ಲ, ದೇಶದ ಅಭಿವೃದ್ಧಿಗೂ ಸಹಕಾರಿಯಾಗಬಲ್ಲಳು. ಈಗ್ಗೆ ಇಪತ್ತು ವರ್ಷಗಳ ಹಿಂದೆ ಶಿಕ್ಷಣ ಪಡೆಯುತ್ತಿದ್ದ ಹೆಣ್ಣುಮಕ್ಕಳ ಸಂಖ್ಯೆ ಪುರುಷರಿಗಿಂತ ಸಾಕಷ್ಟು ಕಡಿಮೆಯಿತ್ತು. ಆದರೆ , ಈಗ ಎರಡು ಪಟ್ಟು ಹೆಚ್ಚಳವಾಗಿದೆ. ಶಿಕ್ಷಣದ ಬಗ್ಗೆ ಜಾಗೃತಿ ಮೂಡಿದಷ್ಟು ಮಹಿಳಾ ಸಬಲೀಕರಣ ಸಾಧ್ಯವಾಗಲಿದೆ ಎಂದು ಅಭಿಪ್ರಾಯಿಸಿದರು.
ಐಸಿಟಿ ಅಕಾಡೆಮಿ ಮುಖ್ಯಸ್ಥ ಎಲ್. ಸುರೇಶ್ ಬಾಬು ಮಾತನಾಡಿ, ಪ್ರಸ್ತುತ ಮಹಿಳಾ ಸಬಲೀಕರಣ ಅತ್ಯಂತ ಅವಶ್ಯಕವಾಗಿದ್ದು, ಮಹಿಳೆಯರ ಜ್ಞಾನ, ಸಹಕಾರವನ್ನು ಬಳಸಿಕೊಳ್ಳುವ ಮೂಲಕ ದೇಶದ ಅಭಿವೃದ್ಧಿಗೊಳಿಸಲು ಮುಂದಾಗಬೇಕಿದೆ. ಆ ನಿಟ್ಟಿನಲ್ಲಿ ಐಸಿಟಿ ಕಳೆದ 12 ವರ್ಷಗಳಿಂದ 700 ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನೀಡಿ, ಸುಮಾರು 20 ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಉದ್ಯೋಗ ನೀಡಿ ಮಹಿಳೆಯರ ಸ್ವಾಯತ್ತತೆಗೆ ಶ್ರಮಿಸುತ್ತಿದೆ ಎಂದು ಹೇಳಿದರು.
ಹನಿವೆಲ್ ಇಂಡಿಯಾದ ಅಧ್ಯಕ್ಷ ಆಶಿಶ್ ಗಾಯಕ್ವಾಡ್ ವೀಡಿಯೋ ಮೂಲಕ ಮಾತನಾಡಿ, ಹನಿವೆಲ್ ಸಂಸ್ಥೆಯು ಯುವ ಪೀಳಿಗೆಗೆ ವಿಶೇಷ ಕೌಶಲ್ಯ ಕಾರ್ಯಕ್ರಮಗಳನ್ನು ನೀಡುವ ಮೂಲಕ ಸರಿಯಾದ ಜ್ಞಾನ ನೀಡಲು ಬದ್ಧವಾಗಿದ್ದು, ತಂತ್ರಜ್ಞಾನದ ಕಾರ್ಯಕ್ರಮಗಳು ಕೈಗೆಟುಕುವಂತಿದ್ದು, ಸಮಾಜದ ಎಲ್ಲ ವರ್ಗದವರಿಗೂ ಲಭ್ಯವಾಗುವ ಜತೆಗೆ ಉತ್ತಮ ವೃತ್ತಿಜೀವನ ನಿರ್ಮಿಸಲು ಅವಕಾಶವಾಗಬೇಕು ಎಂಬ ಉದ್ದೇಶದಿಂದ ನಮ್ಮ ಸಂಸ್ಥೆ ಎಲ್ಲರಿಗೂ ಉತ್ತಮ ಗುಣಮಟ್ಟದ ಕೌಶಲ ಶಿಕ್ಷಣ ನೀಡುತ್ತಿವೆ ಎಂದರು.
ಕಾಲೇಜಿನ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಸಿ.ಆರ್. ನಿರ್ಮಲ ಪ್ರಾಸ್ತಾವಿಕ ನುಡಿದರು, ಬಿಐಇಟಿ ಕಾಲೇಜು ನಿರ್ದೇಶಕ ಪ್ರೊ. ವೈ.ವೃಷಭೇಂದಪ್ಪ, ವಿಷ್ಣುಪ್ರಸಾದ್ ಪ್ರೊ.ಚೇತನ ಪ್ರಕಾಶ್, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರೊ.ಸುಮನ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಪ್ರೊ. ಎಂ. ವರ್ಷಾ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಶಿಲ್ಪ ನಿರೂಪಿಸಿದರು. ಮೇಘ ಮತ್ತು ನೇಹ ಪ್ರಾರ್ಥಿಸಿದರು.