ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಟಾನ: ದಾವಿವಿ ಕುಲಪತಿ ಶರಣಪ್ಪ ಹಲಸೆ

IMG-20210819-WA0034

 

ದಾವಣಗೆರೆ: ಅಂತರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಸ್ಪರ್ಧೆಯಲ್ಲಿ ನಮ್ಮ ಮಕ್ಕಳನ್ನು ಕೌಶಲಯುಕ್ತವಾಗಿ, ವೃತ್ತಿಪರವಾಗಿ ಸಿದ್ಧಗೊಳಿಸುವ ಉದ್ದೇಶದಿಂದ ಆರಂಭಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದಾವಣಗೆರೆ ವಿಶ್ವವಿದ್ಯಾನಿಲಯ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಅನುಷ್ಠಾನಕ್ಕೆ ತರಲು ಸಜ್ಜಾಗಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಹೇಳಿದರು.

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಪತ್ರಿಕಾಗೋಷ್ಠಿ‌ ನಡೆಸಿ ಮಾತನಾಡಿದ ಅವರು, ನೂತನ ನೀತಿಯನ್ವಯ ವ್ಯಾಸಂಗದ ವಿಷಯವನ್ನು ವಿದ್ಯಾರ್ಥಿಗಳೇ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.

ಪಠ್ಯಕ್ರಮ, ಕಲಿಕೆ ಜೊತೆ ಕೌಶಲ, ಭಾಷೆಗೂ ಆದ್ಯತೆ ನೀಡಲಾಗುತ್ತಿದೆ. ದೇಸಿ ಸಂಸ್ಕೃತಿ, ಮಾನವೀಯ ಮೌಲ್ಯ, ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವ ಉದ್ದೇಶವನ್ನೂ ಒಳಗೊಂಡಿರುವ ನೂತನ ಶಿಕ್ಷಣ ನೀತಿಯು ಮಕ್ಕಳ ಬದುಕಿನ ಭವಿಷ್ಯ ರೂಪಿಸಲು ನೆರವಾಗಲಿದೆ ಎಂದರು.

ನೂತನ ನೀತಿಯು ಶೈಕ್ಷಣಿಕ ಕ್ಷೇತ್ರದಲ್ಲಿ ಪರಿವರ್ತನೆಯ ಅವಕಾಶಗಳನ್ನು ತೆರೆದಿಡಲಿದೆ. ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ಎದುರಾಗುವ ಎಲ್ಲ ಸಮಸ್ಯೆ, ಆತಂಕಗಳನ್ನು ನಿವಾರಿಸಲು ವಿಶ್ವವಿದ್ಯಾನಿಲಯ ಸಿದ್ಧತೆ ಮಾಡಿಕೊಂಡಿದೆ. ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯರೂಪಿಸಲು ಬದ್ಧವಾಗಿ ಕೆಲಸ ಮಾಡಲಿದೆ ಎಂದು ತಿಳಿಸಿದರು.

ಉನ್ನತ ಶಿಕ್ಷಣದಲ್ಲಿ ಗುರುತರ ಬದಲಾವಣೆಗೆ ಈಗಿರುವ ಶೈಕ್ಷಣಿಕ ರಚನೆಯ ಕ್ರಮವನ್ನು ಬದಲಿಸಲಾಗಿದೆ. ಪ್ರಸ್ತುತ ಮೂರು ವರ್ಷದ ಸ್ನಾತಕ ಪದವಿಯಲ್ಲಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಾಕಷ್ಟು ಅವಕಾಶಗಳನ್ನು ನೀಡಲಾಗಿದೆ. ಕೌಶಲ ಆಧಾರಿತ ಶಿಕ್ಷಣವೇ ಮುಖ್ಯವಾಗಿದ್ದು, ವಿದ್ಯಾರ್ಥಿ ಪದವಿ ಮುಗಿಸಿದ ನಂತರ ಉದ್ಯೋಗಕ್ಕೆ ಸಿದ್ಧನಾಗುವಂತೆ ತಯಾರು ಮಾಡಲು ಪ್ರಸ್ತುತ ಶಿಕ್ಷಣ ಪದ್ಧತಿ ಸಹಕಾರಿ ಆಗಲಿದೆ ಎಂದು ಅಭಿಪ್ರಾಯಪಟ್ಟರು.

ಪದವಿ ಶಿಕ್ಷಣವನ್ನು ಪ್ರಸ್ತುತ ಮೂರು ವರ್ಷದ ಬದಲಾಗಿ ನಾಲ್ಕು ವರ್ಷಕ್ಕೆ ವಿಸ್ತರಿಸಲಾಗಿದೆ. ಆದರೆ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಮುಕ್ತ ಅವಕಾಶ ನೀಡಲಾಗಿದೆ. ಒಂದು ವರ್ಷ ಪೂರೈಸಿದ ನಂತರ ಆಸಕ್ತಿ ಇರದಿದ್ದರೆ ಓದು ನಿಲ್ಲಿಸಬಹುದು ಅಥವಾ ಬೇರೊಂದು ಕೋರ್ಸ್ ಮಾಡಬಹುದು. ಆಗ ವಿದ್ಯಾರ್ಥಿಗೆ ಒಂದು ವರ್ಷ ಕೋರ್ಸ್ನ ಪ್ರಮಾಣಪತ್ರ ನೀಡಲಾಗುತ್ತದೆ. ಎರಡು ವರ್ಷಕ್ಕೆ ಡಿಪ್ಲೊಮಾ, ಮೂರು ವರ್ಷಕ್ಕೆ ಪದವಿ ಪ್ರಮಾಣ ಪತ್ರ ನೀಡಲಾಗುವುದು. ನಾಲ್ಕು ವರ್ಷ ಮುಗಿಸಿದರೆ ಆನರ್ಸ್ ಪದವಿ ನೀಡಲಾಗುತ್ತದೆ ಎಂದರು.

ಒಂದು ವೇಳೆ ವಿದ್ಯಾರ್ಥಿಯು ಸ್ನಾತಕೋತ್ತರ ಪದವಿ ಮಾಡಲು ಇಚ್ಛಿಸಿದರೆ ಮೂರು ವರ್ಷ ಪದವಿ ಓದಿದವರಿಗೆ ಎರಡು ಹಾಗೂ ನಾಲ್ಕು ವರ್ಷ ಪದವಿ ಓದಿದವರಿಗೆ ಒಂದು ವರ್ಷ ಸ್ನಾತಕೋತ್ತರ ಪದವಿಗೆ ಅವಕಾಶವಿದೆ. ಪಿಎಚ್‌ಡಿ ಪದವಿ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳು ನಾಲ್ಕು ವರ್ಷದ ಆನರ್ಸ್ ಪದವಿ ನಂತರ ಅವಕಾಶ ಪಡೆಯಬಹುದು ಅಥವಾ ಸ್ನಾತಕೋತ್ತರ ಪದವಿ ನಂತರವೂ ಪಡೆಯಬಹುದು ಎಂದು ವಿವರಿಸಿದರು.

ಹೊಸ ಪದ್ಧತಿಯಲ್ಲಿ ಎಂ.ಫಿಲ್ ಪದವಿಗೆ ಅವಕಾಶವಿಲ್ಲ. ಅದಕ್ಕೆ ಬದಲಾಗಿ ಪಿಎಚ್.ಡಿ. ಆದ್ಯತೆ ನೀಡಲಾಗಿದೆ. ಪದವಿ ಶಿಕ್ಷಣದಲ್ಲಿ ಆಸಕ್ತಿಯ ಒಂದು ವಿಷಯವನ್ನು ಮುಖ್ಯವಾಗಿ (ಮೇಜರ್) ಅಧ್ಯಯನ ಮಾಡಿದರೆ, ಎರಡು ವಿಷಯಗಳನ್ನು ಮೈನರ್ ಆಗಿ ಕಲಿಯಬಹುದು. ಇಲ್ಲವಾದರೆ ಎರಡು ಮುಖ್ಯ ವಿಷಯಗಳನ್ನು ಕಲಿಯಬಹುದು. ಓದಿನ ಮಧ್ಯ ಸೀಮಿತ ಅವಧಿಗೆ ವಿಶ್ರಾಂತಿ ಪಡೆಯಲೂ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ. ನಂತರ ಮುಂದಿನ ಕೋರ್ಸ್ ಮುಂದುವರಿಸಬಹುದು ಎಂದು ನುಡಿದರು

ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ ಆದ್ಯತೆ : ಕಲಿಕೆ, ಬೋಧನೆಗಳಲ್ಲಿ ತಂತ್ರಜ್ಞಾನದ ಬಳಕೆಗೆ ಒತ್ತು, ಮಾತೃಭಾಷೆ ಜೊತೆಗೆ ಭಾಷೆ, ವಿಷಯಗಳ ಅಧ್ಯಯನಕ್ಕೂ ಅವಕಾಶ ನೀಡಲಾಗಿದೆ. ವೃತ್ತಿಪರವಾದ ಮೌಲಿಕ ಶಿಕ್ಷಣವು ಪ್ರಸ್ತುತ ನೂತನ ಶಿಕ್ಷಣದ ನೀತಿಯಗುರಿ ಮತ್ತು ಉದ್ದೇಶವಾಗಿದೆ. ವಿದ್ಯಾರ್ಥಿಗಳಿಗೆ ಪದವಿ ನಂತರ ಸ್ವಾವಲಂಬಿ ಬದುಕು ನಿರ್ಮಾಣಕ್ಕೆ ಅವಕಾಶ ನೀಡುವ ಶಿಕ್ಷಣ ಇದಾಗಿದೆ ಎಂದು ನುಡಿದರು.

ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ.ಗಾಯತ್ರಿ ದೇವರಾಜ, ಪರೀಕ್ಷಾಂಗ ಕುಲಸಚಿವೆ ಪ್ರೊ.ಎಚ್.ಎಸ್. ಅನಿತಾ, ಹಣಕಾಸು ಅಧಿಕಾರಿ ಪ್ರಿಯಾಂಕ ಡಿ., ಸಿಂಡಿಕೇಟ್ ಸದಸ್ಯರಾದ ವಿಜಯಲಕ್ಷ್ಮೀ‌ ಹಿರೇಮಠ, ಇನಾಯತ್‌ಉಲ್ಲಾ ಟಿ., ಡೀನ್‌ರಾದ ಪ್ರೊ. ಕೆ.ಬಿ.ರಂಗಪ್ಪ, ಡಾ. ಕೆ.ವೆಂಕಟೇಶ್, ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಪ್ರೊ.ಯು.ಬಿ. ಮಹಾಬಲೇಶ್ವರ, ಪ್ರಾಧ್ಯಾಪಕರಾದ ಪ್ರೊ.ರವಿಕುಮಾರ ಪಾಟೀಲ, ಪ್ರೊ. ಗೋಪಿನಾಥ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಶಿವಕುಮಾರ ಕಣಸೋಗಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!