ಅಪರಾಧ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ: ಎಸ್‌ಪಿ

ದಾವಣಗೆರೆ: ಅಪರಾಧಗಳು ನಡೆದ ಮೇಲೆ ತನಿಖೆ ನಡೆಸುವುದಕ್ಕಿಂತ ಅಪರಾಧಗಳು ಆಗದಂತೆ ನೋಡಿಕೊಳ್ಳುವುದು ಉತ್ತಮ. ಈ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್ ಹೇಳಿದರು.
ನಗರದ ಹೊರ ವಲಯದಲ್ಲಿನ ಕರೂರು ಕೆಳ ಸೇತುವ ಸಮೀಪ ಇರುವ ವಿಷನ್ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ವಿಷನ್ ಇಂಟರ್ ನ್ಯಾಷನಲ್ ಸ್ಕೂಲ್ ಹಾಗೂ ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಅಪರಾಧ ತಡೆ ಮಾಸಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಪೊಲೀಸರು ಜನಸ್ನೇಹಿಗಳಾಗಿ ಸದಾ ಸಾರ್ವಜನಿಕರ ಆಸ್ತಿಪಾಸಿಗಳ ರಕ್ಷಣೆಗಾಗಿ ಶ್ರಮಿಸುತ್ತಾರೆ. ಕಾರಣ ಅಪರಾಧಗಳ ತಡೆಗೆ ಸಾರ್ವಜನಿಕರು ಸಹಕಾರ ನೀಡಬೇಕು. ವಿದ್ಯಾರ್ಥಿಗಳು ಕಾನೂನು ಪರಿಪಾಲನೆ ಕಡೆಗೆ ಗಮನ ಹರಿಸಿ ಯಾವುದೇ ಸಂದರ್ಭದಲ್ಲಿ ಯಾರಿಂದಲಾದರೂ ತಪ್ಪು ಕಂಡು ಬಂದರೆ ಪ್ರಶ್ನೆ ಮಾಡಬೇಕು. ಅಪರಾಧ ಚಟುವಟಿಕೆಗಳನ್ನು ತಡೆಯಬೇಕೆಂದು ತಿಳಿಸಿದರು.
ಕೇವಲ ಪೊಲೀಸರಿಂದ ಅಪರಾಧಗಳ ತಡೆ ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕರ ಸಹಕಾರವೂ ಮುಖ್ಯ. ಶಾಲಾ ಕಾಲೇಜು ಹಂತದಲ್ಲಿ ವಿದ್ಯಾರ್ಥಿ ಸಮೂಹ ಹೆಜ್ಜೆ ತಪ್ಪುವುದು ಸಹಜ. ಸಮಾಜದಲ್ಲಿ ಚಿಕ್ಕ ಮಕ್ಕಳು ತಪ್ಪುದಾರಿಯಲ್ಲಿ ಹೋಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಮಕ್ಕಳು ತಾತ್ಕಾಲಿಕ ಆಕರ್ಷಣೆಗೆ ಬಲಿಯಾಗದೇ ತಮ್ಮ ತಂದೆ ತಾಯಿಗಳ ಆಶಯದಂತೆ ಚೆನ್ನಾಗಿ ಓದಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಬೇಕೆಂದು ಕಿವಿಮಾತು ಹೇಳಿದರು.
ಹಿರಿಯ ನ್ಯಾಯವಾದಿ ಎಲ್.ಹೆಚ್.ಅರುಣ್‌ಕುಮಾರ್ ಮಾತನಾಡಿ, ದೇಶದ ಸರ್ವಾಂಗೀಣ ಅಭಿವೃದ್ದಿ ಆಗಬೇಕಾದರೆ ಪ್ರಜೆಗಳ ಅರಿವಿನ ಮಟ್ಟ ಹೆಚ್ಚಾಗಬೇಕು. ಸಮಾಜವು ಸುಸ್ಥಿರವಾಗಿ ನಡೆಯಬೇಕಾದರೆ ನೆಲದ ಕಾನೂನುಗಳು ಉತ್ತಮ ಅಧಿಕಾರಿಗಳ ಮೂಲಕ ಸಮರ್ಪಕ ಅನುಷ್ಠಾನ ಆಗಬೇಕಾಗಿದೆ ಎಂದು ತಿಳಿಸಿದರು.
ಅತಿಥಿಗಳಾಗಿ ಹಿರಿಯ ವಕೀಲರಾದ ಕೆ.ಹೆಚ್.ಅತಾವುಲ್ಲಾ ಖಾನ್ ಮಾತನಾಡಿ, ಭಾರತದ ಸಂವಿಧಾನವು ಎಲ್ಲರಿಗೂ ಸಮಾನವಾದ ಹಕ್ಕು, ಅವಕಾಶ, ಕರ್ತವ್ಯಗಳನ್ನು ನೀಡಿದ್ದು, ಉತ್ತಮ ಶಿಕ್ಷಣ ಪಡೆಯುವ ಮೂಲಕ ಅವುಗಳ ಬಗ್ಗೆ ಜಾಗೃತಿ ಹೊಂದಬೇಕೆAದರು.
ಕಾನೂನು ಸಲಹೆಗಾರ ರಜ್ವಿ ಖಾನ್ ಮಾತನಾಡಿ, ಮಕ್ಕಳು ವಿದ್ಯಾರ್ಜನೆ ಕಡೆಗೆ ಗಮನಕೊಟ್ಟು ಕಾನೂನುಗಳ ಬಗ್ಗೆ ತಿಳಿದುಕೊಳ್ಳುವ ಮೂಲಕ ಉತ್ತಮ ವಿಚಾರಗಳನ್ನು ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಕೀಲರಾದ ಅಬ್ದುಲ್ ರಬ್, ಸೈಯದ್ ಖಲೀಲ್, ಆಡಳಿತಾಧಿಕಾರಿ ನಸ್ರೀನ್ ಪಟೇಲ್, ಗೌಸುಲ್ಲಾ ಅಹಮದ್, ಜುಬೇರ್, ಮಹಮ್ಮದ್ ಶಫೀವುಲ್ಲಾ, ಎನ್.ಸಾಧಿಕ್, ನೂರುಲ್ಲಾ, ಹಾಜ್ರಾ, ನುಸ್ರತ್ ಖಾನಂ, ಜಮಾಲುದ್ದೀನ್, ಸೈಯದ್ ಸಯಿದ್, ಫೈಜಾನ್, ಮಹಮ್ಮದ್ ಇಸ್ಮಾಯಿಲ್, ಅಮ್ಜದ್, ಟಿ.ಬಿ.ವೆಂಕಟೇಶ್ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!